ಮಧ್ಯಪ್ರದೇಶ | ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಆರೋಪ : ಕಾಂಗ್ರೆಸ್ ಮಾಜಿ ನಾಯಕ ಹಾಜಿ ಶಹಝಾದ್ ಅಲಿಯ ಬಂಗಲೆ ನೆಲಸಮ

PC : freepressjournal.in
ಛತ್ತರ್ ಪುರ್ (ಮಧ್ಯಪ್ರದೇಶ): ಛತ್ತರ್ ಪುರ್ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಮಾಜಿ ಕಾಂಗ್ರೆಸ್ ನಾಯಕ ಹಾಜಿ ಶಹಝಾದ್ ಅಲಿಯವರ ವೈಭವೋಪೇತ ಬಂಗಲೆಯನ್ನು ಪೊಲೀಸ್ ಹಾಗೂ ಜಿಲ್ಲಾಡಳಿತದ ಜಂಟಿ ಕಾರ್ಯಾಚರಣೆಯಲ್ಲಿ ನೆಲಸಮಗೊಳಿಸಿರುವ ಘಟನೆ ನಡೆದಿದೆ.
ಶೆಹಝಾದ್ ಅಲಿ ಹಾಗೂ ಇನ್ನಿತರ 150 ಮಂದಿ ಛತ್ತರ್ ಪುರ್ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ನಿರ್ದೇಶನದ ಮೇರೆಗೆ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ.
ಮುಸ್ಲಿಂ ಸಮುದಾಯದ ಕುರಿತು ಕೆಲ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ನೆನಪೋಲೆಯನ್ನು ಸಲ್ಲಿಸಲು ಭಾರಿ ಜನರ ಗುಂಪಿನೊಂದಿಗೆ ಶಹಝಾದ್ ಅಲಿ ಪೊಲೀಸ್ ಠಾಣೆಗೆ ತೆರಳಿದ್ದರು ಎಂದು ಹೇಳಲಾಗಿದೆ. ಆದರೆ, ಕ್ರಮೇಣ ಅಲ್ಲಿ ಮಾತಿನ ಚಕಮಕಿ ನಡೆದಿದೆ. ಇದರ ಬೆನ್ನಿಗೇ, ಆಕ್ರೋಶಗೊಂಡಿರುವ ಜನರ ಗುಂಪು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಘಟನೆಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಈ ದಾಳಿಯ ವಿರುದ್ಧ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದ ಪೊಲೀಸ್ ಸಿಬ್ಬಂದಿಗಳು, ಮಧ್ಯಪ್ರದೇಶ ಸರಕಾರವು ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಗುರುವಾರ ಬೆಳಗ್ಗೆ ಗಡಿ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಶಹಝಾದ್ ಅಲಿ ನಿವಾಸವನ್ನು ತಲುಪಿದರು. ಒಂದು ವೇಳೆ ತುರ್ತು ಪರಿಸ್ಥಿತಿಯೇನಾದರೂ ಉದ್ಭವಿಸಿದರೆ, ಅದನ್ನು ನಿಭಾಯಿಸಲು ಅವರೊಂದಿಗೆ ವೈದ್ಯಕೀಯ ತಂಡವೂ ತೆರಳಿತ್ತು.
Madhya Pradesh: The lavish bunglow of Congress leader Shahzad Ali who lead the mob that attacked and pelted stones at the police station in Chhatarpur bulldozed by authorities pic.twitter.com/XFW0ODUkGq
— Megh Updates ™ (@MeghUpdates) August 22, 2024
ಮನೆಯ ಬೀಗವನ್ನು ಒಡೆದ ಪೊಲೀಸರು, ಮನೆಯ ಕಾನೂನು ಬಾಹಿರ ಭಾಗವನ್ನು ಜೆಸಿಬಿಯ ಮೂಲಕ ನೆಲಸಮಗೊಳಿಸಿದರು. ಮನೆಯ ಹೊರಾಂಗಣವನ್ನು ನೆಲಕ್ಕೆ ಕೆಡವಲಾಯಿತು. ಇದೇ ವೇಳೆ, ಎಲ್ಲ ಮೂರು ಯಂತ್ರಗಳನ್ನು ಮೂರು ಭಾಗಗಳಿಂದ ನಿಯೋಜಿಸಲಾಗಿತ್ತು.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯುವುದನ್ನು ತಡೆಯಲು ನಾವು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಸಿದರು. ಪೊಲೀಸರಿಗೆ ಬೆಂಬಲವಾಗಿ ಇಂದು ಬೆಳಗ್ಗೆ ನಗರದ ಮಾರುಕಟ್ಟೆ ಬಂದ್ ಆಗಿತ್ತು.