ಬಿಹಾರ ಸರಕಾರವನ್ನು ಬೆಂಬಲಿಸಿರುವುದಕ್ಕೆ ವಿಷಾದವಾಗುತ್ತಿದೆ : ಚಿರಾಗ್ ಪಾಸ್ವಾನ್
ನಿತೀಶ್ ಕುಮಾರ್ ಸರಕಾರಕ್ಕೆ ಎನ್ಡಿಎ ಮೈತ್ರಿಕೂಟದ ನಾಯಕ ತರಾಟೆ

ಚಿರಾಗ್ ಪಾಸ್ವಾನ್ (Photo: PTI)
ಪಾಟ್ನಾ : ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಕಾಪಾಡುವಲ್ಲಿ ಅಸಮರ್ಥವಾಗಿರುವ ಸರಕಾರವನ್ನು ಬೆಂಬಲಿಸಿರುವುದಕ್ಕೆ ವಿಷಾದವಾಗುತ್ತಿದೆ ಎಂದು ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಭಾಗವಾಗಿದೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್, ಇತ್ತೀಚೆಗೆ ಹೆಚ್ಚುತ್ತಿರುವ ಹಿಂಸಾತ್ಮಕ ಅಪರಾಧಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿವೆ ಎಂಬ ಹೇಳಿಕೆಗಳನ್ನು ನಾನು ಕೇಳಿದ್ದೇನೆ ಮತ್ತು ಈ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ. ಆದರೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುವುದು ಸರಕಾರದ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ವಿಫಲವಾಗುತ್ತಿರುವ ಸರಕಾರವನ್ನು ಬೆಂಬಲಿಸಲು ನನಗೆ ವಿಷಾದವಿದೆ ಎಂದು ಹೇಳಿದ್ದಾರೆ.
ರಾಜ್ಯದ ಪರಿಸ್ಥಿತಿ ಭಯಾನಕವಾಗಿದೆ. ಆಡಳಿತ ವೈಫಲ್ಯಕ್ಕೆ ಅಸಮರ್ಥತೆ ಮತ್ತು ಅಪರಾಧಿಗಳೊಂದಿಗಿನ ಸಹಭಾಗಿತ್ವ ಎರಡನ್ನೂ ದೂಷಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರತಿದಿನ ಕೊಲೆ, ಅಪಹರಣ, ದರೋಡೆ ಮತ್ತು ಅತ್ಯಾಚಾರ ಘಟನೆಗಳು ವರದಿಯಾಗುತ್ತಿವೆ ಎಂದು ಪಾಸ್ವಾನ್ ಹೇಳಿದ್ದಾರೆ.
ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಈ ಬಗ್ಗೆ ತಕ್ಷಣವೇ ಪರಿಶೀಲಿಸಬೇಕು ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.







