ಲಾರೆನ್ಸ್ ಬಿಷ್ಣೋಯಿ ಅಮೆರಿಕದ ಸಂಸ್ಥೆಯ ಏಜೆಂಟ್ : ಗ್ಯಾಂಗ್ಸ್ಟರ್ ಗೋದಾರಾ

PC : NDTV
ಹೊಸದಿಲ್ಲಿ,ಸೆ.23: ಕ್ರಿಮಿನಲ್ಗಳಾದ ಗೋದಾರಾ ಮತ್ತು ಬಿಷ್ಣೋಯಿ ಗ್ಯಾಂಗ್ಗಳ ನಡುವೆ ಜಟಾಪಟಿ ತೀವ್ರಗೊಂಡಂತಿದೆ. ಲಾರೆನ್ಸ್ ಬಿಷ್ಣೋಯಿಯನ್ನು ದೇಶದ್ರೋಹಿ ಎಂದು ಆರೋಪಿಸಿರುವ ರೋಹಿತ್ ಗೋದಾರಾ, ತನ್ನ ಸೋದರ ಅನ್ಮೋಲ್ನನ್ನು ಉಳಿಸಿಕೊಳ್ಳಲು ಆತ ಅಮೆರಿಕದ ಏಜೆನ್ಸಿಯೊಂದರ ಜೊತೆ ಶಾಮೀಲಾಗಿದ್ದು, ಅದಕ್ಕೆ ಭಾರತದ ಕುರಿತು ಗುಪ್ತಚರ ಮಾಹಿತಿಗಳನ್ನು ಒದಗಿಸುತ್ತಿದ್ದಾನೆ ಎಂದು ಪ್ರತಿಪಾದಿಸಿದ್ದಾನೆ.
ಬಿಷ್ಣೋಯಿ ಭೂಗತ ಜಗತ್ತಿನಲ್ಲಿ ಹೆಸರು ಮಾಡಲು ನಟ ಸಲ್ಮಾನ್ ಖಾನ್ಗೆ ಹಾನಿಯನ್ನುಂಟು ಮಾಡಲು ಉದ್ದೇಶಿಸಿದ್ದಾನೆ ಎಂದು ಪರಿಶೀಲಿಸಲ್ಪಡದ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಆರೋಪಿಸಿರುವ ಗೋದಾರಾ, ‘ದೇಶದ್ರೋಹಿ’ ಬಿಷ್ಣೋಯಿ ಜೊತೆ ತನ್ನನ್ನು ಅಥವಾ ತನ್ನ ಸಹಚರರನ್ನು ತಳುಕು ಹಾಕಬೇಡಿ ಎಂದು ಮಾಧ್ಯಮಗಳನ್ನು ಆಗ್ರಹಿಸಿದ್ದಾನೆ.
ಗ್ಯಾಂಗ್ಸ್ಟರ್ಗಳಾಗಿರುವ ಗೋಲ್ಡಿ ಬ್ರಾರ್ ಮತ್ತು ಗೋದಾರಾ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಮತ್ತು ಹಲವು ರಾಜ್ಯಗಳ ಪೋಲಿಸರಿಗೆ ಬೇಕಾಗಿರುವ ಕ್ರಿಮಿನಲ್ಗಳಾಗಿದ್ದಾರೆ. ಬ್ರಾರ್ ಅಮೆರಿಕದಲ್ಲಿ ಮತ್ತು ಗೋದಾರಾ ಬ್ರಿಟನ್ನಲ್ಲಿದ್ದಾರೆ ಎಂದು ಶಂಕಿಸಲಾಗಿದೆ.
ಸೆ.12ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಿವಾಸದ ಹೊರಗೆ ಗುಂಡು ಹಾರಾಟ ನಡೆದಿತ್ತು. ಗೋದಾರಾ ಮತ್ತು ಬ್ರಾರ್ ಸಾಮಾಜಿಕ ಮಾಧ್ಯಮದಲ್ಲಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ಘಟನೆಯು ಸಮುದಾಯದಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿತ್ತು.
ಪಟಾನಿ ನಿವಾಸದ ಹೊರಗೆ ಗುಂಡು ಹಾರಾಟದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಾದ ರವೀಂದ್ರ ಅಲಿಯಾಸ್ ಕುಲ್ಲು ಮತ್ತು ಅರುಣ ಸೆ.17ರಂದು ಗಾಝಿಯಾಬಾದ್ನಲ್ಲಿ ಪೋಲಿಸ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದರು. ಹರ್ಯಾಣ ನಿವಾಸಿಗಳಾಗಿದ್ದ ಇವರಿಬ್ಬರೂ ಬ್ರಾರ್ ಮತ್ತು ಗೋದಾರಾ ಜೊತೆ ಗುರುತಿಸಿಕೊಂಡಿದ್ದರು.







