ನಡೆಯುವುದನ್ನು ಹಾಗೂ ತಿನ್ನುವುದನ್ನು ಮಗುವಿನಂತೆ ಕಲಿಯುತ್ತಿದ್ದೇನೆ: ಬಾಹ್ಯಾಕಾಶ ನೌಕೆಯಿಂದ ಶುಭಾಂಶು ಶುಕ್ಲಾ ಸಂದೇಶ

Photo credit: X/SpaceX
ಹೊಸದಿಲ್ಲಿ: “ನಾನು ಬಾಹ್ಯಾಕಾಶದಲ್ಲಿ ನಡೆಯುವುದನ್ನು ಹಾಗೂ ತಿನ್ನುವುದನ್ನು ಮಗುವಿನಂತೆ ಕಲಿಯುತ್ತಿದ್ದೇನೆ” ಎಂದು ಬಾಹ್ಯಾಕಾಶ ಕಕ್ಷೆಯಿಂದ ಭಾರತೀಯ ವಾಯುಪಡೆಯ ಪೈಲಟ್ ಹಾಗೂ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸಂದೇಶ ರವಾನಿಸಿದ್ದಾರೆ.
ಆ್ಯಕ್ಸಿಯಂ-4 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಬೆಳಸಿದ ಬಳಿಕ ಅವರು ಈ ಸಂದೇಶ ರವಾನಿಸಿದ್ದಾರೆ.
ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಕುಳಿತ ನಂತರ, “ನನ್ನ ದೇಶವಾಸಿಗಳೇ, ನಮಸ್ಕಾರ” ಎಂದು ಅವರು ದೇಶಕ್ಕೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಿದ್ದರು. ಫಾಲ್ಕನ್ 9 ರಾಕೆಟ್ ಮೇಲಕ್ಕೇರುತ್ತಿದ್ದಂತೆಯೇ, “ಎಂಥ ಪ್ರಯಾಣ ” ಎಂದು ಉದ್ಗರಿಸಿದ ಅವರು, “ಸವಾರಿ ಪ್ರಾರಂಭಗೊಂಡ ನಂತರ, ನೀವು ನಿಮ್ಮ ಆಸನಕ್ಕೆ ನೂಕಲ್ಪಡುತ್ತೀರಿ. ನಂತರ, ನೀವು ನಿರ್ವಾತದಲ್ಲಿ ತೇಲುತ್ತಿರುತ್ತೀರಿ” ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವ ಕುರಿತು ಪ್ರತಿಕ್ರಿಯಿಸಿರುವ ಅವರು, “ನಾನು ಬಾಹ್ಯಾಕಾಶದಲ್ಲಿ ನಡೆಯುವುದನ್ನು ಹಾಗೂ ತಿನ್ನುವುದನ್ನು ಮಗುವಿನಂತೆ ಕಲಿಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಈ ಯೋಜನೆ ಶುಭಾಂಶು ಶುಕ್ಲಾ ಪಾಲಿಗೆ ಮಾತ್ರವಲ್ಲ, ದೇಶಕ್ಕೂ ಐತಿಹಾಸಿಕವಾಗಿದೆ, 1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಕೈಗೊಂಡಿದ್ದರು. ಇದಾದ 41 ವರ್ಷಗಳ ಬಳಿಕ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ.







