ನಟ ಧರ್ಮೇಂದ್ರಗೆ ಅಮಿತಾಭ್ ಬಚ್ಚನ್ ರಿಂದ ಭಾವುಕ ವಿದಾಯ

ಧರ್ಮೇಂದ್ರ , ಅಮಿತಾಭ್ ಬಚ್ಚನ್ | Credit : DH file photo
ಮುಂಬೈ: ಅಪರೂಪದ ವ್ಯಕ್ತಿಯಾಗಿದ್ದ ಧರ್ಮೇಂದ್ರ ರಂಗಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ನಟ ಧರ್ಮೇಂದ್ರರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಶೋಲೆ, ಚುಪ್ಕೆ ಚುಪ್ಕೆ, ರಾಮ್ ಬಲರಾಮ್, ಗುಡ್ಡಿ, ಚರಣ್ ದಾಸ್ ಹಾಗೂ ದೋಸ್ತ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಧರ್ಮೇಂದ್ರ ಹಾಗೂ ಅಮಿತಾಭ್ ಬಚ್ಚನ್ ಒಟ್ಟಾಗಿ ನಟಿಸಿದ್ದರು.
ಶೋಲೆ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಕ್ರಮವಾಗಿ ಜೈ ಹಾಗೂ ವೀರು ಪಾತ್ರಗಳಲ್ಲಿ ಅಭಿನಯಿಸಿದ್ದರು. ಅವರಿಬ್ಬರ ನಡುವಿನ ಕ್ಯಾಮೆರಾ ಮುಂದೆ ಹಾಗೂ ಹಿಂದಿನ ಬಲಿಷ್ಠ ಸ್ನೇಹ ಅಪರೂಪದ ನಿದರ್ಶನವಾಗಿ ಇಂದಿಗೂ ಉಳಿದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತಾಭ್ ಬಚ್ಚನ್, “ಮತ್ತೊಬ್ಬ ಮಹಾನ್ ನಟ ತಮ್ಮ ರಂಗಸ್ಥಳದಿಂದ ನಿರ್ಗಮಿಸಿದ್ದಾರೆ” ಎಂದು ಕಂಬನಿ ಮಿಡಿದಿದ್ದಾರೆ.
“ಧರ್ಮೇಂದ್ರ ತಮ್ಮ ದೈಹಿಕ ಉಪಸ್ಥಿತಿಯಿಂದ ಮಾತ್ರ ಅದ್ಭುತ ವ್ಯಕ್ತಿಯಾಗಿರಲಿಲ್ಲ; ಬದಲಿಗೆ ತಮ್ಮ ಹೃದಯ ವೈಶಾಲ್ಯತೆಯಿಂದಲೂ ಅವರು ಅದ್ಭುತ ವ್ಯಕ್ತಿಯಾಗಿದ್ದರು. ಪಂಜಾಬ್ ನ ಹಳ್ಳಿಯೊಂದರಿಂದ ಅವರು ತಮ್ಮೊಂದಿಗೆ ಸರಳತೆಯನ್ನು ಹೊತ್ತು ತಂದಿದ್ದರು ಹಾಗೂ ತಮ್ಮ ಸ್ವಭಾವದಲ್ಲಿ ಅವರು ನೈಜವಾಗಿ ಉಳಿದಿದ್ದರು. ತಮ್ಮ ವೈಭವಯುತ ವೃತ್ತಿ ಜೀವನದುದ್ದಕ್ಕೂ ಅವರು ನಿಷ್ಕಳಂಕರಾಗಿದ್ದರು. ಸಿನಿಮಾ ರಂಗದಲ್ಲಿ ಪ್ರತಿ ದಶಕದಲ್ಲೂ ಬದಲಾವಣೆಯಾಗುತ್ತಿದ್ದರೂ, ಅವರು ಮಾತ್ರ ಎಂದಿನಂತೆಯೇ ಉಳಿದಿದ್ದರು” ಎಂದು ಅವರು ಶ್ಲಾಘಿಸಿದ್ದಾರೆ.







