ಲೇಹ್ ಹಿಂಸಾಚಾರ ಕುರಿತು ತನಿಖೆ: ಹೇಳಿಕೆ ದಾಖಲಿಸಲು 10 ದಿನ ಗಡುವು ವಿಸ್ತರಣೆ

Photo credit: PTI
ಲೇಹ್/ಜಮ್ಮು: ಲೇಹ್ ನಲ್ಲಿ ಸೆ. 24 ರಂದು ಸಂಭವಿಸಿದ ಹಿಂಸಾಚಾರ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಾಂಗ ವಿಚಾರಣಾ ಆಯೋಗವು ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಇನ್ನೂ 10 ದಿನಗಳವರೆಗೆ ವಿಸ್ತರಿಸಿದೆ. ಲೇಹ್ ಅಪೆಕ್ಸ್ ಬಾಡಿ (LAB) ಸಲ್ಲಿಸಿದ್ದ ಔಪಚಾರಿಕ ಮನವಿಯನ್ನು ಪರಿಗಣಿಸಿದ ನಂತರ ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರಾಡಳಿತ ಪ್ರದೇಶ ಲಡಾಖ್ ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ವಿಶೇಷ ಸ್ಥಾನ ಮಾನಕ್ಕಾಗಿ ಒತ್ತಾಯಿಸುತ್ತಿದ್ದ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು. 1999ರ ಕಾರ್ಗಿಲ್ ಯುದ್ಧದ ಯೋಧನೊಬ್ಬ ಸಹ ಇವರಲ್ಲಿ ಒಬ್ಬರು. 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆ ಲಡಾಖ್ ನಲ್ಲಿ ತಿಂಗಳುಗಳಿಂದ ನಡೆಯುತ್ತಿದ್ದ ಆಂದೋಲನದ ತೀವ್ರತೆ ಹೆಚ್ಚಿಸಿತ್ತು.
ಗೃಹ ಸಚಿವಾಲಯವು ಅ. 17 ರಂದು ನ್ಯಾಯಾಂಗ ವಿಚಾರಣಾ ಆಯೋಗ ರಚಿಸಿ, ಹಿಂಸಾಚಾರಕ್ಕೆ ಕಾರಣವಾದ ಸಂದರ್ಭಗಳು ಹಾಗೂ ಪೊಲೀಸರು ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸುವಂತೆ ಸೂಚಿಸಿತ್ತು.
ಶುಕ್ರವಾರ ಹೊರಡಿಸಿದ ಆದೇಶದಲ್ಲಿ, ಆಯೋಗವು ನವೆಂಬರ್ 27 ರಂದು LAB ಅಧ್ಯಕ್ಷರಿಂದ ಬಂದ ಮನವಿಯನ್ನು ಸ್ವೀಕರಿಸಿದ ಬಗ್ಗೆ ತಿಳಿಸಿದೆ. “ಇನ್ನೂ ಹಲವರು ತಮ್ಮ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಸಲ್ಲಿಸಲು ಬಯಸುತ್ತಿದ್ದಾರೆ” ಎಂದು ಮನವಿಯಲ್ಲಿ LAB ತಿಳಿಸಿತ್ತು. ಮೂಲ ಗಡುವು ನವೆಂಬರ್ 28 ರಂದು ಅಂತ್ಯಗೊಳ್ಳಬೇಕಾಗಿದ್ದರೂ, ಆಯೋಗದ ಮುಖ್ಯಸ್ಥರಾದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಾ. ಬಿ. ಎಸ್. ಚೌಹಾಣ್ ಅವರು ಈ ಮನವಿಯನ್ನು ವರ್ಚುವಲ್ ಮೂಲಕ ಪರಿಶೀಲಿಸಿ ಗಡುವನ್ನು ಡಿಸೆಂಬರ್ 8 ರವರೆಗೆ ವಿಸ್ತರಿಸಿದ್ದಾರೆ ಎಂದು ಆಯೋಗದ ಕಾರ್ಯದರ್ಶಿ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ.







