ಮಧ್ಯವಯಸ್ಸಿನಲ್ಲಿ ಕಡಿಮೆ ನಿದ್ರೆಯಿಂದ ಮಿದುಳಿಗೆ ಬೇಗ ವಯಸ್ಸಾಗುತ್ತದೆ: ಅಧ್ಯಯನ ವರದಿ

PC : freepik.com
ಹೊಸದಿಲ್ಲಿ: ಮಿದುಳಿನ ಸ್ಕ್ಯಾನ್ಗಳು ಆರಂಭಿಕ ಮಧ್ಯವಯಸ್ಸಿನಲ್ಲಿ ಸಾಕಷ್ಟು ನಿದ್ರೆ ಮಾಡಿರದ ಜನರಲ್ಲಿ ಮಿದುಳಿನ ವಯಸ್ಸಾಗುವಿಕೆಯ ಸಂಕೇತವಾದ ಹೆಚ್ಚಿನ ಮಟ್ಟದ ಕುಗ್ಗುವಿಕೆಗಳನ್ನು ಬಹಿರಂಗಗೊಳಿಸಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಸರಾಸರಿ 40 ವರ್ಷ ಪ್ರಾಯದ 589 ಜನರ ಗುಂಪು ಅಧ್ಯಯನದ ಆರಂಭದಲ್ಲಿ ಮತ್ತು ಐದು ವರ್ಷಗಳ ಬಳಿಕ ನಿದ್ರೆಗೆ ಸಂಬಂಧಿಸಿದ್ದ ಪ್ರಶ್ನಾವಳಿಗೆ ಉತ್ತರಿಸಿತ್ತು. ಅಧ್ಯಯನ ಆರಂಭಗೊಂಡ 15 ವರ್ಷಗಳ ಬಳಿಕ ಭಾಗವಹಿಸಿದ್ದವರ ಮಿದುಳು ಸ್ಕ್ಯಾನ್ಗಳನ್ನು ನಡೆಸಲಾಗಿತ್ತು.
‘ಭಾಗಿಯಾಗಿದ್ದವರ ಮಿದುಳಿನ ವಯಸ್ಸನ್ನು ನಿರ್ಧರಿಸಲು ಮಿದುಳು ಸ್ಕ್ಯಾನ್ಗಳನ್ನು ಬಳಸಿದ್ದ ನಮ್ಮ ಅಧ್ಯಯನವು ಕಳಪೆ ನಿದ್ರೆಗೂ ಮಧ್ಯವಯಸ್ಸಿನಲ್ಲಿ ಮಿದುಳಿನ ಮೂರು ವರ್ಷಗಳ ಹೆಚ್ಚುವರಿ ವಯಸ್ಸಾಗುವಿಕೆಗೂ ಸಂಬಂಧವಿದೆ ಎನ್ನುವುದನ್ನು ಸೂಚಿಸಿದೆ ’ಎಂದು ವರದಿಯ ಸಹಲೇಖಕರಾದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸ್ಯಾನ್ ಫ್ರಾನ್ಸಿಸ್ಕೋದ ಕ್ಲೆಮೆನ್ಸ್ ಕೆವಾಯಿಸ್ ಹೇಳಿದ್ದಾರೆ. ವರದಿಯು ನ್ಯೂರಾಲಜಿ ಜರ್ನಲ್ನಲ್ಲಿ ಪ್ರಕಟಗೊಂಡಿದೆ.
ಕಳಪೆ ನಿದ್ರೆಯ ಅಭ್ಯಾಸವು ನಂತರದ ಜೀವನದಲ್ಲಿ ಕಳಪೆ ಆಲೋಚನೆ ಮತ್ತು ಕಡಿಮೆ ಜ್ಞಾಪಕ ಶಕ್ತಿಯೊಂದಿಗೆ ತಳುಕು ಹಾಕಿಕೊಂಡಿದ್ದು, ಜನರನ್ನು ಬುದ್ಧಿಮಾಂದ್ಯತೆಯ ಹೆಚ್ಚಿನ ಅಪಾಯಕ್ಕೆ ಒಡ್ಡುತ್ತದೆ ಎಂದು ಕೆವಾಯಿಸ್ ಹೇಳಿದ್ದಾರೆ.
ಅಧ್ಯಯನದಲ್ಲಿ ಭಾಗವಹಿಸಿದ್ದವರ ನಿದ್ರೆಯ ಅಭ್ಯಾಸಗಳನ್ನು ಕಡಿಮೆ ನಿದ್ರೆ, ನಿದ್ರೆಯ ಕೆಟ್ಟ ಗುಣಮಟ್ಟ, ಸುಖವಾಗಿ ನಿದ್ರಿಸಲು ತೊಂದರೆ, ಬೆಳಿಗ್ಗೆ ಬೇಗನೆ ಎಚ್ಚರಗೊಳ್ಳುವುದು ಮತ್ತು ಹಗಲಿನಲ್ಲಿ ನಿದ್ರೆ ಹೀಗೆ ವರ್ಗೀಕರಿಸಲಾಗಿತ್ತು. ಇವುಗಳನ್ನು ಆಧರಿಸಿ ಅವರನ್ನು ಕಳಪೆ ನಿದ್ರಾ ಅಭ್ಯಾಸಗಳ ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಮಟ್ಟಗಳ ಮೂರು ಗುಂಪುಗಳನ್ನಾಗಿ ವರ್ಗೀಕರಿಸಲಾಗಿತ್ತು.
ಮಿದುಳಿನ ಸ್ಕ್ಯಾನ್ಗಳು ಬಹಿರಂಗಗೊಳಿಸಿದ್ದ ಮಿದುಳಿನ ಕುಗ್ಗುವಿಕೆಯನ್ನು ಮಿದುಳಿನ ವಯಸ್ಸನ್ನು ನಿರ್ಧರಿಸಲು ಬಳಸಲಾಗಿತ್ತು, ಹೆಚ್ಚಿನ ಕುಗ್ಗುವಿಕೆ ಮಟ್ಟಗಳು ಹೆಚ್ಚು ವಯಸ್ಸಾಗಿದ್ದನ್ನು ಸೂಚಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮಧ್ಯಮ ಮಟ್ಟದ ಕಳಪೆ ನಿದ್ರೆಯ ಅಭ್ಯಾಸಗಳನ್ನು ಹೊಂದಿದವರಲ್ಲಿ ಮಿದುಳಿನ ವಯಸ್ಸು ಕಡಿಮೆ ಮಟ್ಟದ ನಿದ್ರೆಯ ಅಭ್ಯಾಸ ಹೊಂದಿದವರಿಗಿಂತ ಸರಾಸರಿ 1.6 ವರ್ಷ ಹೆಚ್ಚಿತ್ತು, ಇದೇ ರೀತಿ ಹೆಚ್ಚಿನ ಮಟ್ಟದ ಕಳಪೆ ನಿದ್ರೆಯ ಅಭ್ಯಾಸ ಹೊಂದಿದವರಲ್ಲಿ ಹೆಚ್ಚಳವು 2.6 ವರ್ಷಗಳಷ್ಟಿತ್ತು.
‘ನಮ್ಮ ಸಂಶೋಧನೆಗಳು ಮಿದುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಆರಂಭದ ಜೀವನದಲ್ಲಿ ನಿದ್ರಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಪ್ರಾಮುಖ್ಯವನ್ನು ಎತ್ತಿ ತೋರಿಸಿವೆ. ಸರಿಯಾದ ಸಮಯದಲ್ಲಿ ನಿದ್ರೆ ಮಾಡುವುದು,ವ್ಯಾಯಾಮ,ನಿದ್ರೆಗೆ ಮುನ್ನ ಕೆಫೀನ್ ಮತ್ತು ಮದ್ಯಪಾನ ವರ್ಜನೆ ಇತ್ಯಾದಿಗಳು ಇದರಲ್ಲಿ ಸೇರಿವೆ ಎಂದು ವರದಿಯ ಸಹಲೇಖಕ,ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸ್ಯಾನ್ ಫ್ರಾನ್ಸಿಸ್ಕೋದ ಕ್ರಿಸ್ಟಿನ್ ಯಾಫೆ ಹೇಳಿದ್ದಾರೆ.







