ಭಾರತ-ಪಾಕಿಸ್ತಾನ ಸಂಘರ್ಷವನ್ನು ಅಂತ್ಯಗೊಳಿಸಲು ಐಎಎಫ್ ಬಳಸಿದ್ದು 50 ಆಯುಧಗಳನ್ನು ಮಾತ್ರ!

PC : NDTV
ಹೊಸದಿಲ್ಲಿ: ಪಾಕಿಸ್ತಾನವು ಕದನ ವಿರಾಮದ ಒಪ್ಪಂದ ಮಾಡಿಕೊಳ್ಳಲು ಭಾರತೀಯ ವಾಯು ಪಡೆ ಬಳಸಿದ್ದು ಕೇವಲ 50 ಆಯುಧಗಳನ್ನು ಮಾತ್ರ ಎಂಬ ವಿಶೇಷ ಸಂಗತಿಯನ್ನು ಭಾರತೀಯ ವಾಯು ಪಡೆಯ ಏರ್ ಮಾರ್ಷಲ್ ನರ್ಮದೇಶ್ವರಿ ತಿವಾರಿ ಬಹಿರಂಗಗೊಳಿಸಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿದ ಮೂರು ತಿಂಗಳ ನಂತರ ಈ ಸಂಗತಿಯನ್ನು ಬಹಿರಂಗಪಡಿಸಲಾಗಿದೆ.
NDTV ರಕ್ಷಣಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಏರ್ ಚೀಫ್ ಮಾರ್ಷಲ್ ನರ್ಮದೇಶ್ವರ್ ತಿವಾರಿ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನೂತನ ದೃಶ್ಯಾವಳಿಗಳು ಹಾಗೂ ವಿವರಗಳನ್ನು ಹಂಚಿಕೊಂಡರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
“ನಮಗೆ ಒದಗಿಸಲಾದ ಆಯ್ಕೆಗಳ ಪಟ್ಟಿಯಲ್ಲಿ ನಮಗೆ ಭಾರಿ ಸಂಖ್ಯೆಯ ಗುರಿಗಳನ್ನು ನಿಗದಿಗೊಳಿಸಲಾಗಿತ್ತು. ಆದರೆ, ಅಂತಿಮವಾಗಿ ಕೇವಲ ಒಂಭತ್ತು ಗುರಿಗಳಿಗೆ ಅಂತ್ಯಗೊಂಡಿತು” ಎಂದು ನರ್ಮದೇಶ್ವೆರ್ ತಿವಾರಿ ಹೇಳಿದ್ದಾರೆ.
“ಈ ಕಾರ್ಯಾಚರಣೆಯ ಮಹತ್ವದ ಯಶಸ್ಸೆಂದರೆ, ನಾವು ಕೇವಲ 50 ಆಯುಧಗಳನ್ನು ಬಳಸಿ, ಈ ಸಂಘರ್ಷಕ್ಕೆ ಅಂತ್ಯ ಹಾಡಿದೆವು. ಹೀಗಾಗಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಹುಮುಖ್ಯ ಭಾಗ ಪರಿಗಣಿಸಬೇಕು” ಎಂದು ಅವರು ಹೇಳಿದ್ದಾರೆ.
“ಯುದ್ಧವನ್ನು ಪ್ರಾರಂಭಿಸುವುದು ಸುಲಭವೇ ಹೊರತು, ಯುದ್ಧವನ್ನು ಅಂತ್ಯಗೊಳಿಸುವುದು ಸುಲಭವಲ್ಲ. ಹೀಗಾಗಿ ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪಡೆಗಳನ್ನು ಸಕ್ರಿಯಗೊಳಿಸಲಾಗಿತ್ತು, ಅವನ್ನು ನಿಯೋಜಿಸಲಾಗಿತ್ತು ಹಾಗೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅವರು ಸಿದ್ಧರಾಗಿದ್ದರು” ಎಂದೂ ಅವರು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಯಶಸ್ಸನ್ನು ಅವರು ಸಮಗ್ರ ವಾಯು ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆಗೆ ಸಲ್ಲಿಸಿದರು. ಈ ವ್ಯವಸ್ಥೆಯು ಭಾರತದ ದಾಳಿ ಮತ್ತು ರಕ್ಷಣೆಯ ಬೆನ್ನೆಲುಬಾಗಿ ಕೆಲಸ ಮಾಡಿತು. ಈ ವ್ಯವಸ್ಥೆಯು ಆರಂಭಿಕ ಪರಿಣಾಮಗಳನ್ನು ತಾಳಿಕೊಳ್ಳಲು ಹಾಗೂ ಬಲಿಷ್ಠ ತಿರುಗೇಟು ನೀಡಲು ಅವಕಾಶ ನೀಡಿತು. ಇದರಿಂದಾಗಿ, ಪಾಕಿಸ್ತಾನವು ಕದನ ವಿರಾಮಕ್ಕೆ ಶರಣಾಗುವಂತಾಯಿತು ಎಂದು ಅವರು ವಿವರಿಸಿದ್ದಾರೆ.







