ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯು ನೈಸರ್ಗಿಕ ಅಂತ್ಯ ಕಾಣಲಿ: ಸುಪ್ರೀಂ ಕೋರ್ಟ್

Photo | deccanherald
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಆಸಕ್ತಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ. ಸಿಜೆಐ ಸ್ವತಃ ಈ ಘಟನೆಯ ಕುರಿತು ಕ್ರಮ ಕೈಗೊಳ್ಳುವುದಕ್ಕೆ ನಿರಾಕರಿಸಿದ್ದರಿಂದ, ವಿಷಯವನ್ನು ಇಲ್ಲಿಗೆ ಮುಗಿಸುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅ.6ರಂದು ವಿಷ್ಣು ವಿಗ್ರಹ ಪ್ರಕರಣದ ವಿಚಾರಣೆ ವೇಳೆ ವಕೀಲ ರಾಕೇಶ್ ಕಿಶೋರ್ ಅವರು ಸಿಜೆಐ ಗವಾಯಿ ಅವರ ಕಡೆ ಶೂ ಎಸೆದಿದ್ದರು. ಈ ಘಟನೆ ಬಳಿಕ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ವಕೀಲರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿತ್ತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. “ಇಂತಹ ನಿಂದನೆ ನೋಟಿಸ್ ನೀಡುವುದರಿಂದ ಆ ವಕೀಲನಿಗೆ ಅನಗತ್ಯ ಪ್ರಚಾರ ಸಿಗುತ್ತದೆ. ಘಟನೆ ತನ್ನದೇ ಆದ ನೈಸರ್ಗಿಕ ಅಂತ್ಯ ಪಡೆಯಲಿ,” ಎಂದು ಅಭಿಪ್ರಾಯಪಟ್ಟಿತು.
ನ್ಯಾಯಾಲಯವು, ಶೂ ಎಸೆಯುವುದು ಅಥವಾ ನ್ಯಾಯಾಲಯದ ಒಳಗಡೆ ಘೋಷಣೆಗಳನ್ನು ಕೂಗುವುದು ನ್ಯಾಯಾಲಯದ ಗೌರವಕ್ಕೆ ಧಕ್ಕೆಯಾದ ಕೃತ್ಯಗಳಾಗಿವೆ ಎಂದು ಸ್ಪಷ್ಟಪಡಿಸಿತು. ಆದರೆ, ಅಂತಹ ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳುವ ನಿರ್ಧಾರವು ಸಂಬಂಧಿತ ನ್ಯಾಯಾಧೀಶರ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಪೀಠ ತಿಳಿಸಿದೆ.
ಇದಲ್ಲದೆ, ಇಂತಹ ಘಟನೆಗಳನ್ನು ಭವಿಷ್ಯದಲ್ಲಿ ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆ ಕುರಿತು ನ್ಯಾಯಾಲಯ ಪರಿಗಣನೆ ನಡೆಸುತ್ತಿರುವುದಾಗಿ ಪೀಠ ಸೂಚಿಸಿದೆ.







