ಮಕ್ಕಳನ್ನು ಅಷ್ಟು ದೂರ ಹೋಗಲು ಬಿಡಬೇಕೇ ಬೇಡವೇ ಎಂದು ಯೋಚಿಸಬೇಕು: ರಾಜಾ ರಘುವಂಶಿ ಕೊಲೆ ಪ್ರಕರಣದ ಬಗ್ಗೆ ಮಧ್ಯಪ್ರದೇಶ ಸಿಎಂ ಪ್ರತಿಕ್ರಿಯೆ

Photo credit: NDTV
ಭೋಪಾಲ್ : ರಾಜಾ ರಘುವಂಶಿ ಕೊಲೆಗೆ ಪತ್ನಿ ಸೋನಂ ಸಂಚು ರೂಪಿಸಿರುವ ಘಟನೆ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಪೋಷಕರು ತಮ್ಮ ಮಕ್ಕಳನ್ನು ಅಷ್ಟು ದೂರ ಹೋಗಲು ಬಿಡಬೇಕೇ ಬೇಡವೇ ಎಂದು ಯೋಚಿಸಬೇಕು ಎಂದು ಹೇಳಿದರು.
ರಾಜಾ ರಘುವಂಶಿ ಕೊಲೆ ಪ್ರಕರಣ ವಿಭಿನ್ನ ತಿರುವು ಪಡೆದುಕೊಂಡು ಸೋನಂಳನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಯಾದವ್, ಈ ಕೊಲೆಯಿಂದ ಸಮಾಜ ಹಲವಾರು ಪಾಠಗಳನ್ನು ಕಲಿಯಬಹುದು ಎಂದು ಹೇಳಿದರು.
ʼಈ ಘಟನೆ ನೋವಿನಿಂದ ಕೂಡಿದೆ ಮತ್ತು ಸಮಾಜಕ್ಕೆ ಒಂದು ಪಾಠವಾಗಿದೆ. ಇದು ನಮಗೆ ಹಲವಾರು ಪಾಠಗಳನ್ನು ಕಲಿಸುತ್ತದೆ. ಮದುವೆಯ ಮೂಲಕ ಎರಡು ಕುಟುಂಬಗಳು ಒಂದಾಗುವಾಗ ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಯೋಚಿಸಬೇಕಾಗುತ್ತದೆ. ಮಕ್ಕಳನ್ನು ಅಷ್ಟು ದೂರ ಹೋಗಲು ಬಿಡುವುದರ ಬಗ್ಗೆಯೂ ಯೋಚಿಸಬೇಕಾಗಿದೆ. ಈ ಘಟನೆಯಿಂದ ನನಗೆ ನೋವಾಗಿದೆ, ಇದು ತುಂಬಾ ನೋವಿನಿಂದ ಕೂಡಿದೆ ಎಂದು ಮೋಹನ್ ಯಾದವ್ ಹೇಳಿದರು.
ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘುವಂಶಿ ಅವರನ್ನು ಮೇ 23ರಂದು ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಪತ್ನಿ ಸೋನಂ ಬಾಡಿಗೆ ಹಂತಕರಿಂದ ಕೊಲೆ ಮಾಡಿಸಿದ್ದಳು. ಈ ಘಟನೆ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು.