ಸುಳ್ಳು ಮತ್ತು ಆಧಾರರಹಿತ : ಅದಾನಿ ಹೂಡಿಕೆಯ ಕುರಿತ ವಾಷಿಂಗ್ಟನ್ ಪೋಸ್ಟ್ ವರದಿಯನ್ನು ಅಲ್ಲಗಳೆದ ಎಲ್ಐಸಿ

ಗೌತಮ ಅದಾನಿ | Photo Credit ; PTI
ಹೊಸ ದಿಲ್ಲಿ: ಎಲ್ಐಸಿ ಹೂಡಿಕೆ ನಿರ್ಧಾರವು ಬಾಹ್ಯ ಶಕ್ತಿಗಳ ಪ್ರಭಾವದಿಂದ ಪ್ರೇರಿತವಾಗಿದೆ ಎಂಬ ವಾಷಿಂಗ್ಟನ್ ಪೋಸ್ಟ್ ಆರೋಪವನ್ನು ಸುಳ್ಳು, ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದುದು ಎಂದು ಎಲ್ಐಸಿ ಅಲ್ಲಗಳೆದಿದೆ.
“ವಾಷಿಂಗ್ಟನ್ ಪೋಸ್ಟ್ ವರದಿಗೆ ಪ್ರತ್ಯುತ್ತರ’ ಎಂದು ಶೀರ್ಷಿಕೆಯೊಂದಿಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಲ್ಐಸಿ, “ವಾಷಿಂಗ್ಟನ್ ಪೋಸ್ಟ್ ವರದಿಗಳನ್ನು ಎಲ್ಐಸಿ ನಿರಾಕರಿಸುತ್ತದೆ. ಎಲ್ಲ ಹೂಡಿಕೆಗಳನ್ನು ಸಮಗ್ರತೆ ಹಾಗೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕೈಗೊಳ್ಳಲಾಗಿದೆ ಎಂದು ದೃಢಪಡಿಸುತ್ತಿದ್ದೇವೆ” ಎಂದು ಹೇಳಿದೆ.
“ಎಲ್ಐಸಿ ಹೂಡಿಕೆ ನಿರ್ಧಾರವು ಬಾಹ್ಯ ಶಕ್ತಿಗಳ ಪ್ರಭಾವದಿಂದ ಪ್ರೇರಿತವಾಗಿದೆ ಎಂಬ ವಾಷಿಂಗ್ಟನ್ ಪೋಸ್ಟ್ ಆರೋಪಗಳು ಸುಳ್ಳು, ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದುದಾಗಿದೆ. ವರದಿಯಲ್ಲಿ ಆರೋಪಿಸಿರುವಂತೆ ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್ಐಸಿ ಹೂಡಿಕೆ ಮಾಡಲು ಅಂತಹ ಯಾವುದೇ ದಾಖಲೆ ಅಥವಾ ಯೋಜನೆಯನ್ನು ಸಿದ್ಧಪಡಿಸಲಾಗಿರಲಿಲ್ಲ” ಎಂದು ಎಲ್ಐಸಿ ಹೇಳಿದೆ.
“ವಿಸ್ತೃತ ಸೂಕ್ತ ಮುನ್ನೆಚ್ಚರಿಕೆಯ ನಂತರ, ಮಂಡಳಿಯ ಅನುಮೋದಿತ ನೀತಿಗಳನ್ವಯ ಹೂಡಿಕೆಯ ನಿರ್ಧಾರಗಳನ್ನು ಎಲ್ಐಸಿ ಸ್ವತಂತ್ರವಾಗಿ ಕೈಗೊಂಡಿದೆ. ಇಂತಹ ನಿರ್ಧಾರಗಳಲ್ಲಿ ಹಣಕಾಸು ಸೇವೆಗಳ ಇಲಾಖೆ ಅಥವಾ ಇನ್ನಾವುದೇ ಸಂಸ್ಥೆಯ ಯಾವುದೇ ಪಾತ್ರವಿಲ್ಲ. ಎಲ್ಐಸಿ ಸೂಕ್ತ ಮುನ್ನೆಚ್ಚರಿಕೆಯ ಗರಿಷ್ಠ ಮಾನದಂಡಗಳನ್ನು ಪಾಲಿಸುತ್ತಿದ್ದು, ಚಾಲ್ತಿಯಲ್ಲಿರುವ ನೀತಿಗಳಿಗನುಗುಣವಾಗಿ ಎಲ್ಲಾ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಕಾಯ್ದೆಗಳು ಮತ್ತು ಶಾಸನಾತ್ಮಕ ಮಾರ್ಗಸೂಚಿಗಳಲ್ಲಿನ ನಿಯಮಗಳು ಎಲ್ಐಸಿಯ ಎಲ್ಲಾ ಪಾಲುದಾರರ ಅತ್ಯುತ್ತಮ ಹಿತಾಸಕ್ತಿಗನುಗುಣವಾಗಿದೆ” ಎಂದು ಅದು ಸ್ಪಷ್ಟನೆ ನೀಡಿದೆ.
ಇದಕ್ಕೂ ಮುನ್ನ, ಅದಾನಿ ಸಮೂಹ ಸಂಸ್ಥೆಗಳ ಬಂದರಿನಿಂದ ಇಂಧನದವರೆಗಿನ ಉದ್ಯಮಗಳು ಸಾಲದ ಸುಳಿಗೆ ಸಿಲುಕಿದ್ದಾಗ ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್ಐಸಿ ಹೂಡಿಕೆ ಮಾಡುವಂತಹ ಯೋಜನೆಯನ್ನು ಅಧಿಕಾರಿಗಳು ರೂಪಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ಹೇಳಿತ್ತು.







