ಅದಾನಿ ಗ್ರೂಪ್ ನಲ್ಲಿ ಎಲ್ಐಸಿ ಹೂಡಿಕೆ | ಪ್ರೀಮಿಯಂ ನಿಮ್ಮದು, ಲಾಭ ಅದಾನಿಯದು: ರಾಹುಲ್ ಗಾಂಧಿ ಟೀಕೆ

PC : PTI
ಹೊಸದಿಲ್ಲಿ : ಅದಾನಿ ಗ್ರೂಪ್ ನಲ್ಲಿ ಸಾರ್ವಜನಿಕ ವಲಯದ ಉದ್ಯಮ ಎಲ್ಐಸಿಯ ಹೂಡಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಸಾರ್ವಜನಿಕರ ಹಣವನ್ನು ಖಾಸಗಿ ಸಂಸ್ಥೆಗಳ ಲಾಭಕ್ಕಾಗಿ ಬಳಸಲಾಗುತ್ತದೆ ಎಂದು ಬೆಟ್ಟು ಮಾಡಿದ್ದಾರೆ.
‘ಹಣ ನಿಮ್ಮದು,ಪಾಲಿಸಿ ನಿಮ್ಮದು,ಪ್ರೀಮಿಯಂ ನಿಮ್ಮದು;ಭದ್ರತೆ, ಅನುಕೂಲ,ಲಾಭ ಅದಾನಿಗೆ’ ಎಂದು ಅವರು ಮಂಗಳವಾರ ಟ್ವೀಟ್ ನಲ್ಲಿ ಹೇಳಿದ್ದಾರೆ.
ತನ್ನ ಈವರೆಗಿನ ಅತ್ಯಂತ ದೊಡ್ಡ ದೇಶಿಯ ಬಾಂಡ್ ವಿತರಣೆಯಲ್ಲಿ 5,000 ಕೋ.ರೂ.ಗಳನ್ನು ತಾನು ಸಂಗ್ರಹಿಸಿರುವುದಾಗಿ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಇಕನಾಮಿಕ್ ರೆನ್ ಲಿ.ಕಳೆದ ವಾರ ಹೇಳಿತ್ತು.
ಅದಾನಿ ಪೋರ್ಟ್ಸ್ 15 ವರ್ಷಗಳ ನಾನ್-ಕನ್ವರ್ಟಿಬಲ್ ಡಿಬೆಂಚರ್(ಎನ್ಸಿಡಿ) ಮೂಲಕ ಎಲ್ಐಸಿಯಿಂದ ನಿಧಿಯನ್ನು ಸಂಗ್ರಹಿಸಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿತ್ತು.
ಅದಾನಿ ಪೋರ್ಟ್ಸ್ ನ ಸದೃಢ ಹಣಕಾಸು ಸ್ಥಿತಿ ಮತ್ತು ‘ಎಎಎ/ಸ್ಥಿರ’ ದೇಶೀಯ ಕ್ರೆಡಿಟ್ ರೇಟಿಂಗ್ನ ಕಾರಣ ಎನ್ಸಿಡಿ ವಿತರಣೆಯನ್ನು ವಾರ್ಷಿಕ ಶೇ.7.75ರ ಸ್ಪರ್ಧಾತ್ಮಕ ಕೂಪನ್ ದರದಲ್ಲಿ ಲಾಕ್ ಮಾಡಲಾಗಿದೆ ಮತ್ತು ಎಲ್ಐಸಿಯು ಪೂರ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಡಿಬೆಂಚರ್ಗಳನ್ನು ಬಿಎಸ್ಇಯಲ್ಲಿ ಲಿಸ್ಟ್ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ.
ಎಲ್ಐಸಿಯು ವಿಮಾ ಪ್ರೀಮಿಯಮ್ಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣವನ್ನು ಅದಾನಿ ಗ್ರೂಪ್ನಲ್ಲಿ ಹೂಡಿಕೆ ಮಾಡುತ್ತಿದೆ ಎಂದು ರಾಹುಲ್ ಆರೋಪಿಸುತ್ತಿದ್ದಾರೆ.
ಎಲ್ಐಸಿ ಸರಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಯಾಗಿದ್ದು, ಭಾರತೀಯ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಗಳನ್ನು ಮಾಡುತ್ತದೆ.







