ಎಲ್ಜೆಪಿ ಸಂಸದೆಯ ವಿರುದ್ಧ ಮತಗಳ್ಳತನದ ಆರೋಪ; ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು!

ಶಾಂಭವಿ ಚೌಧುರಿ | PC : NDTV
ಪಾಟ್ನಾ,ನ.9: ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷ (ಎಲ್ಜೆಪಿ-ರಾಮ್ವಿಲಾಸ್ ಬಣ)ದ ಸಂಸದೆ ಶಾಂಭವಿ ಚೌಧುರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದ್ದು, ಅವರು ‘ವೋಟ್ಚೋರಿ’ (ಮತಗಳ್ಳತನ) ನಡೆಸಿದ್ದಾರೆಂದು ಎದುರಾಳಿ ಪಕ್ಷಗಳು ಆರೋಪಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಶಾಂಭವಿ ಅವರು ಬಂಕಿಪುರ ವಿಧಾನಸಭಾ ಕ್ಷೇತ್ರದ ಬುದ್ಧ ಕಾಲನಿಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತನ್ನ ಕುಟುಂಬಿಕರೊಂದಿಗೆ ಮತಚಲಾಯಿಸಿದ್ದರು. ಆನಂತರ ಛಾಯಾಗ್ರಾಹಕರಿಗೆ ಮುಂದೆ ತನ್ನೆ ಬಲಗೈಯನ್ನು ಎತ್ತಿ, ಮತದಾನದ ಶಾಯಿಗುರುತನ್ನು ಪ್ರದರ್ಶಿಸಿದ್ದರು. ಬಳಿಕ ಅವರು ಇನ್ನೊಂದು ಕೈಯನ್ನು ಮೇಲಕ್ಕೆತ್ತಿದ್ದು, ಅದರಲ್ಲೂ ಶಾಯಿ ಗುರುತು ಕಂಡುಬಂದಿದೆ.
ಈ ವೀಡಿಯೋ ಪ್ರಸಾರಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶಾಂಭವಿ ವಿರುದ್ಧ ಆರೋಪಗಳ ಸುರಿಮಳೆಯಾಗಿವೆ. ಆಕೆ ಒಂದಕ್ಕಿಂತ ಹೆಚ್ಚು ಮತದಾನ ನಡೆಸಿದ್ದಾರೆಂದು ಹಲವರು ಪ್ರತಿಕ್ರಿಯಿಸಿದ್ದರು. ಆನಂತರ ಪಾಟ್ನಾ ಜಿಲ್ಲಾಡಳಿತವು ಈ ಬಗ್ಗೆ ಹೇಳಿಕೆಯೊಂದನ್ನು ಹೊರಡಿಸಿ ಸ್ಪಷ್ಟೀಕರಣವೊಂದನ್ನು ನೀಡಿತ್ತು.
ಮತಗಟ್ಟೆಯ ಸಿಬ್ಬಂದಿ ತಪ್ಪಾಗಿ ಶಾಂಭವಿ ಅವರ ಬಲಗೈಗೆ ಶಾಯಿ ಹಚ್ಚಿದ್ದರು. ಆನಂತರ ಅವರ ಎಡಗೈಗೆ ಶಾಯಿ ಹಚ್ಚಿ ತಪ್ಪನ್ನು ಸರಿಪಡಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.





