ನಾಪತ್ತೆಯಾದ ಎಂಡೋಸಲ್ಫಾನ್ ನ ನೂರಾರು ಬ್ಯಾರಲ್ ಗಳನ್ನು ಪತ್ತೆ ಹಚ್ಚಿ: ಸಿಪಿಸಿಬಿಗೆ ಎನ್ಜಿಟಿ ನಿರ್ದೇಶನ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ | Photo Credit : NDTV
ಹೊಸದಿಲ್ಲಿ, ನ. 28: ಕೇರಳದಲ್ಲಿ ನಿಷೇಧಿತ ಕೀಟನಾಶಕ ಎಂಡೋಸಲ್ಫಾನ್ ನ ನೂರಾರು ಬ್ಯಾರಲ್ ಗಳು ನಾಪತ್ತೆಯಾಗಿರುವ ಕುರಿತು ತನಿಖೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ಕೇರಳ ತೋಟಗಾರಿಕೆ ನಿಗಮ (ಪಿಸಿಕೆ) ಹಾಗೂ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಎಸ್ಪಿಸಿಬಿ)ಗೆ ನಿರ್ದೇಶಿಸಿದೆ.
ಅಲ್ಲದೆ, ಜನವರಿ ಮೊದಲ ವಾರದ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಅದು ನಿರ್ದೇಶಿಸಿದೆ.
ಎಂಡೋಸಲ್ಫಾನ್ ಅತ್ಯಂತ ವಿಷಕಾರಿ ಕೀಟ ನಾಶಕವಾಗಿದ್ದು, ಇದು ಆನುವಂಶಿಕ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಆದುದರಿಂದ ಈ ಕೀಟನಾಶಕವನ್ನು ಸುಪ್ರೀಂ ಕೋರ್ಟ್ 2011ರಲ್ಲಿ ನಿಷೇಧಿಸಿದೆ.
ಸಿಪಿಸಿಬಿ 2024 ಜನವರಿ 1ರಂದು ಸಲ್ಲಿಸಿದ ತನ್ನ ಮೊದಲ ವರದಿಯಲ್ಲಿ ಕೇರಳದಲ್ಲಿ 278 ಬ್ಯಾರಲ್ ಎಂಡೋಸಲ್ಫಾನ್ ಇದೆ ಎಂದು ಹೇಳಿತ್ತು. ಆದರೆ, ಅದಕ್ಕೆ ಕೇವಲ 20 ಬ್ಯಾರಲ್ ಎಂಡೋಸಲ್ಫಾನ್ ಅನ್ನು ಪತ್ತೆ ಹಚ್ಚಲು ಹಾಗೂ ವಶಪಡಿಸಲು ಸಾಧ್ಯವಾಗಿತ್ತು. ಆದರೆ, ಅನಂತರ 2025 ಜುಲೈ 16ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಸಿಪಿಸಿಬಿ, ಕೇವಲ 69 ಬ್ಯಾರೆಲ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿತ್ತು. ಈ ಬ್ಯಾರಲ್ ಗಳ ಎಂಡೋಸಲ್ಫಾನ್ ಅನ್ನು ದಹನದ ಮೂಲಕ ವಿಲೇವಾರಿ ಮಾಡಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿತ್ತು.
ಈ ಭಿನ್ನ ಅಭಿಪ್ರಾಯದ ಹಿನ್ನೆಲೆಯಲ್ಲಿ ಪರಸರ ಹೋರಾಟಗಾರ ಹಾಗೂ ಅರ್ಜಿದಾರ ರವೀಂದ್ರನಾಥ್ ಶ್ಯಾನ್ಭೋಗ್ ಎನ್ಜಿಟಿ ಮುಂದೆ ಪ್ರಶ್ನೆ ಎತ್ತಿದ್ದರು. ಸಿಪಿಸಿಬಿ ಪತ್ತೆ ಹಚ್ಚಿರುವ ಬ್ಯಾರಲ್ ಗಳ ಸಂಖ್ಯೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಕೇರಳ-ಕರ್ನಾಟಕದ ಗುಡ್ಡಗಾಡು ಪ್ರದೇಶಗಳಲ್ಲಿ ಎಂಡೋಸಲ್ಪಾನ್ ಅನ್ನು ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದರು.
ನಾಪತ್ತೆಯಾದ ಎಂಡೋಸಲ್ಫಾನ್ ನ ಎಲ್ಲಾ ಬ್ಯಾರಲ್ ಗಳನ್ನು ಪತ್ತೆ ಹಚ್ಚುವಂತೆ ಹಾಗೂ ಎಂಡೋಸಲ್ಫಾನ್ ನ ಎಲ್ಲಾ ಕುರುಹನ್ನು ನಾಶಪಡಿಸುವಂತೆ ಶ್ಯಾನ್ ಭೋಗ್ ಅವರು ಸಿಪಿಸಿಬಿ ಹಾಗೂ ಸಂಬಂಧಿತ ಸಂಸ್ಥೆಗಳನ್ನು ಆಗ್ರಹಿಸಿದ್ದರು.







