ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಮೈಲಿಗೆಯಾಯಿತೆಂದು ದಲಿತ ಬಾಲಕನನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ ಮೇಲ್ಜಾತಿಯ ಮಹಿಳೆ: ಬಾಲಕ ಆತ್ಮಹತ್ಯೆ!

ಸಾಂದರ್ಭಿಕ ಚಿತ್ರ
ಶಿಮ್ಲಾ: ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಮೈಲಿಗೆಯಾಯಿತೆಂದು ಬಲಿಷ್ಠ ಜಾತಿಯ ಮಹಿಳೆಯೊಬ್ಬರು 12 ವರ್ಷದ ದಲಿತ ಬಾಲಕನನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದರಿಂದ, ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಮ್ಲಾ ಜಿಲ್ಲೆಯ ರೊಹ್ರು ತಾಲ್ಲೂಕಿನಲ್ಲಿ ನಡೆದಿದೆ ಎಂದು tribuneindia.com ವರದಿ ಮಾಡಿದೆ.
ಈ ಘಟನೆಯ ವಿರುದ್ಧ ಸ್ಥಳೀಯ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಗೆ ನಡೆಸುತ್ತಿದ್ದಾರೆ.
ಮೃತ ಬಾಲಕನನ್ನು ಸುರೇಶ್ ಬಂತ ಎಂದು ಗುರುತಿಸಲಾಗಿದೆ.
ಮೃತ ಬಾಲಕನ ಚಿಕ್ಕಪ್ಪನ ಪ್ರಕಾರ, ಸುರೇಶ್ ಬಂತ ನೆರೆಮನೆಯೊಳಕ್ಕೆ ಹೋಗಿದ್ದ. ಆತ ತನ್ನ ಮನೆಗೆ ಬಂದಿದ್ದರಿಂದ ಮನೆ ಮೈಲಿಗೆಯಾಯಿತೆಂದು ದೂಷಿಸಿದ ಆ ಮನೆಯ ಒಡತಿ, ಆತನನ್ನು ಕೊಟ್ಟಿಗೆಯೊಂದರಲ್ಲಿ ಕೂಡಿ ಹಾಕಿದ್ದಾಳೆ. ಬಳಿಕ, ಮನೆಯನ್ನು ಶುದ್ಧಗೊಳಿಸಲು ನನಗೆ ನಿನ್ನ ಪೋಷಕರು ಮೇಕೆಯನ್ನು ನೀಡಬೇಕು ಎಂದು ಆತನಿಗೆ ಸೂಚಿಸಿದ್ದಾಳೆ ಎನ್ನಲಾಗಿದೆ.
ಕೊಟ್ಟಿಗೆಯಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಬಂದಿರುವ ಸುರೇಶ್ ಬಂತ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮರು ದಿನ ಮೃತಪಟ್ಟಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ರೊಹ್ರು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಣವ್ ಚೌಹಾಣ್, “ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಘಟನೆಗೆ ಯಾವುದೇ ಪ್ರತ್ಯಕ್ಷದರ್ಶಿ ಇಲ್ಲದೆ ಇರುವುದರಿಂದ, ನಾವು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಅವಲಂಬಿಸಿದ್ದೇವೆ. ಈ ಕುರಿತು ತನಿಖೆ ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಘಟನೆಯ ವಿರುದ್ಧ ದಲಿತ ಸಮುದಾಯ ಹಾಗೂ ದಲಿತ ನಾಯಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಘಟನೆಯು ಈ ಪ್ರಾಂತ್ಯದಲ್ಲಿ ಜೀವಂತವಿರುವ ಜಾತಿ ತಾರತಮ್ಯದ ಪ್ರತಿಫಲನವಾಗಿದೆ ಎಂದು ಕೋಲಿ ಸಮಾಜದ ಖಜಾಂಚಿ ವಿನೋದ್ ಸಿಂಘ್ತಾ ಆರೋಪಿಸಿದ್ದಾರೆ.
“ಬಲಿಷ್ಠ ಜಾತಿಗಳ ಮನೆಗೆ ನಾಯಿಗಳು ಯಾವುದೇ ಸಮಸ್ಯೆ ಇಲ್ಲದೆ ಪ್ರವೇಶಿಸಬಹುದು. ಆದರೆ, ಅದನ್ನೇ ಪರಿಶಿಷ್ಟ ಜಾತಿಯ ವ್ಯಕ್ತಿ ಮಾಡಿದರೆ, ಅದನ್ನು ಮೈಲಿಗೆ ಎಂದು ಪರಿಗಣಿಸಲಾಗುತ್ತದೆ. ಈ ಮನಸ್ಥಿತಿ ತುಂಬಾ ದುರದೃಷ್ಟಕರ” ಎಂದು ಅವರು ವಿಷಾದಿಸಿದ್ದಾರೆ.
ಈ ಘಟನೆ ಕುರಿತು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಸಂಜಯ್ ಚೌಹಾಣ್ ಕೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಂದು ವೇಳೆ ಬಾಲಕನೇನಾದರೂ ಜಾತಿ ಆಧಾರಿತ ಅವಮಾನದಿಂದ ಮೃತಪಟ್ಟಿದ್ದರೆ, ಅದು ರಾಷ್ಟ್ರೀಯ ಅವಮಾನವಾಗಿದೆ. ಇಂತಹ ಘಟನೆ ಮತ್ತೊಮ್ಮೆ ಪುನರಾವರ್ತನೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.







