‘ಲೋಕಭವನ’: ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ

Photo Credit : PTI
ಹೊಸದಿಲ್ಲಿ, ಡಿ. 3: ದೇಶದಲ್ಲಿರುವ ಎಲ್ಲಾ ರಾಜಭವನಗಳನ್ನು ‘ಲೋಕ ಭವನ’ವಾಗಿ ಮರುನಾಮಕರಣ ಮಾಡುವ ಕೇಂದ್ರ ಗೃಹ ಸಚಿವಾಲಯದ ನವೆಂಬರ್ 25ರ ಆದೇಶದ ಬಗ್ಗೆ ರಾಜ್ಯಸಭೆಯಲ್ಲಿ ಬುಧವಾರ ಕಾವೇರಿದ ಚರ್ಚೆ ನಡೆಯಿತು.
ಶೂನ್ಯ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್ ಸಂಸದೆ ದೋಲಾ ಸೇನ್, ಈ ವಿಷಯದಲ್ಲಿ ಸರಕಾರ ಕಾದುಕೊಂಡು ಬಂದಿರುವ ಗೌಪ್ಯತೆಯನ್ನು ಪ್ರಶ್ನಿಸಿದರು. ‘‘ಮೊತ್ತ ಮೊದಲು ನಾನು ಹೇಳುವುದೇನೆಂದರೆ, ಸಂಸತ್ಗಾಗಲಿ, ವಿಧಾನಸಭೆಗಳಿಗಾಗಲಿ ಅಥವಾ ಸಚಿವ ಸಂಪುಟಕ್ಕಾಗಲಿ ಈ ವಿಷಯ ಗೊತ್ತೇ ಇಲ್ಲ. ಅವರು ಈ ವಿಷಯವನ್ನು ನಿಮ್ಮ ಬಳಿಕ ಕೂಡ ಚರ್ಚೆ ಮಾಡಿಲ್ಲ’’ ಎಂದು ಸಭಾಪತಿಯನ್ನು ಉದ್ದೇಶಿಸಿ ಮಾತನಾಡಿದ ಸೇನ್ ಹೇಳಿದರು.
ಆದರೆ, ಅವರು M NAREGA ಸೇರಿದಂತೆ ಇತರ ವಿಷಯಗಳನ್ನು ಪ್ರಸ್ತಾಪಿಸಿದಾಗ ಚರ್ಚೆ ವಿವಾದಕ್ಕೆಡೆಮಾಡಿತು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಸಿ.ಪಿ. ರಾಧಾಕೃಷ್ಣನ್, ಬೇರೆ ವಿಷಯಗಳ ಬಗ್ಗೆ ಮಾತನಾಡಿದರೆ ಕಡತದಲ್ಲಿ ದಾಖಲಾಗುವುದಿಲ್ಲ ಎಂದು ಹೇಳಿದರು.
ಸದನದ ನಾಯಕ ಜೆ.ಪಿ. ನಡ್ಡಾ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘‘ರಾಜಭವನದ ಹೆಸರನ್ನು ಲೋಕಭವನ ಎಂಬುದಾಗಿ ಬದಲಾವಣೆ ಮಾಡಿರುವ ಬಗ್ಗೆ ಶೂನ್ಯ ಅವಧಿಯಲ್ಲಿ ಚರ್ಚೆಗೆ ನೀವು ಅವರಿಗೆ ಅನುಮತಿ ನೀಡಿದಿರಿ. ಅವರು ಮನರೇಗ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದರು. ಅದು ವಿಷಯಕ್ಕೆ ಸಂಬಂಧಿಸಿಲ್ಲವಾದುದರಿಂದ ಅವರ ಮಾತುಗಳನ್ನು ಕಡತದಿಂದ ಅಳಿಸಿಹಾಕಬೇಕು ಮತ್ತು ಲೋಕಭವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಅನುಮತಿ ನೀಡಬೇಕು’’ ಎಂದು ಅವರು ಹೇಳಿದರು.
ವಿಷಯಕ್ಕೆ ಹೊರತಾದ ಯಾವುದೇ ಮತು ಕಡತಕ್ಕೆ ಹೋಗುವುದಿಲ್ಲ ಎಂದು ಸಭಾಪತಿ ರಾಧಾಕೃಷ್ಣನ್ ಪುನರುಚ್ಚರಿಸಿದರು.
ಸೇನ್ರ ರಕ್ಷಣೆಗೆ ಧಾವಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘‘ಅವರು ಯಾವುದೇ ಅಸಾಂವಿಧಾನಿಕ ಮಾತುಗಳನ್ನು ಆಡಿಲ್ಲ. ಪ್ರತಿಯೊಂದೂ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಆ ವಿಷಯವನ್ನು ನಿಮ್ಮ ಕಚೇರಿಯಲ್ಲಿ ಪರಿಶೀಲಿಸಲಾಗಿದೆ. ಅದರ ಬಳಿಕವೇ ಅವರು ಮಾತನಾಡಿದ್ದಾರೆ’’ ಎಂದು ಹೇಳಿದರು.
ಸರಕಾರವು ಚರ್ಚೆಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ ಅವರು, ‘‘ಸದನದ ನಾಯಕರು ಮಧ್ಯಪ್ರವೇಶಿಸಿ, ಅಸಾಂವಿಧಾನಿಕ ಮಾತುಗಳನ್ನು ಆಡಲಾಗಿದೆ ಮತ್ತು ಅವುಗಳನ್ನು ಅಳಿಸಿಹಾಕಿ ಎಂದು ಹೇಳುವಂತಿಲ್ಲ. ಸದನದ ನಾಯಕರು ದಮನ ಕಾರ್ಯದಲ್ಲಿ ತೊಡಗಿದ್ದಾರೆ. ನೀವು ಸಂಸದೀಯ ಪ್ರಜಾಪ್ರಭುತ್ವದಂತೆ ಸದನ ನಡೆಸಲು ಬಯಸುತ್ತಿಲ್ಲ’’ ಎಂಬುದಾಗಿಯೂ ಖರ್ಗೆ ಹೇಳಿದರು.







