ಲೋಕಸಭೆಯಲ್ಲಿ ಜನ ವಿಶ್ವಾಸ ತಿದ್ದುಪಡಿ ಮಸೂದೆ ಮಂಡನೆ; ಆಯ್ಕೆ ಸಮಿತಿಗೆ ಉಲ್ಲೇಖ

ಲೋಕಸಭ | PC : PTI
ಹೊಸದಿಲ್ಲಿ,ಆ.18: ಜೀವನ ಮತ್ತು ವ್ಯವಹಾರ ಸುಗಮತೆಯನ್ನು ಉತ್ತೇಜಿಸಲು ಕೆಲವು ಸಣ್ಣಪುಟ್ಟ ಅಪರಾಧಗಳನ್ನು ಅಪರಾಧ ವ್ಯಾಖ್ಯೆಯಿಂದ ಮುಕ್ತಗೊಳಿಸಲು ಬಯಸಿರುವ ಜನ ವಿಶ್ವಾಸ(ನಿಬಂಧನೆಗಳ ತಿದ್ದುಪಡಿ) ಮಸೂದೆ 2025ನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದ್ದು,ನಂತರ ಅದನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಉಲ್ಲೇಖಿಸಲಾಯಿತು.
ಮಸೂದೆಯನ್ನು ಮಂಡಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಮಸೂದೆಯು ವ್ಯವಹಾರವನ್ನು ಸುಗಮಗೊಳಿಸಲು ನಂಬಿಕೆಯಾಧಾರಿತ ಆಡಳಿತವನ್ನು ಹೆಚ್ಚಿಸಲು ಬಯಸಿದೆ ಎಂದು ತಿಳಿಸಿದರು.
ನಂತರ ಮಸೂದೆಯನ್ನು ಆಯ್ಕೆಸಮಿತಿಗೆ ಉಲ್ಲೇಖಿಸಲಾಗಿದ್ದು, ಸಂಸತ್ತಿನ ಮುಂದಿನ ಅಧಿವೇಶನದ ಮೊದಲ ದಿನ ವರದಿಯನ್ನು ಸದನಕ್ಕೆ ಸಲ್ಲಿಸುವಂತೆ ಅದಕ್ಕೆ ಸೂಚಿಸಲಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಇತರ ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಸಚಿವರು ಮಸೂದೆಯನ್ನು ಮಂಡಿಸಿದರು. ಪ್ರತಿಭಟನೆಯು ಮಂದುವರಿದಾಗ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಯಿತು.
ಮಸೂದೆಯು 350ಕ್ಕೂ ಅಧಿಕ ನಿಬಂಧನೆಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾವಿಸಿದೆ.
2023ರ ಆರಂಭದಲ್ಲಿ ಜನವಿಶ್ವಾಸ(ತಿದ್ದುಪಡಿಗಳಿಗೆ ನಿಬಂಧನೆ) ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಅದು 19 ಸಚಿವಾಲಯಗಳು ಮತ್ತು ಇಲಾಖೆಗಳು ನಿರ್ವಹಿಸುವ 42 ಕೇಂದ್ರೀಯ ಕಾಯ್ದೆಗಳ 183 ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಿತ್ತು. ಈ ಕಾಯ್ದೆಯ ಮೂಲಕ ಕೆಲವು ನಿಬಂಧನೆಗಳಡಿ ಜೈಲು ಶಿಕ್ಷೆ ಮತ್ತು/ಅಥವಾ ದಂಡವನ್ನು ಸರಕಾರವು ಕೈಬಿಟ್ಟಿತ್ತು. ಕೆಲವು ನಿಬಂಧನೆಗಳಲ್ಲಿ ಜೈಲುಶಿಕ್ಷೆಯನ್ನು ಕೈಬಿಟ್ಟು ದಂಡವನ್ನು ಉಳಿಸಿಕೊಳ್ಳಲಾಗಿತ್ತು.







