ಪ್ರತಿಭಟನಾನಿರತ ಪ್ರತಿಪಕ್ಷ ಸಂಸದರಿಗೆ ಲೋಕಸಭಾ ಸ್ಪೀಕರ್ ಎಚ್ಚರಿಕೆ

PC : ddnews.gov.in
ಹೊಸದಿಲ್ಲಿ, ಆ. 18: ಭಾರತೀಯ ಚುನಾವಣಾ ಆಯೋಗ ಮತ್ತು ಅದು ಬಿಹಾರದ ಮತದಾರರ ಪಟ್ಟಿಯಲ್ಲಿ ಮಾಡುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿರುದ್ಧ ನಡೆಸಲಾಗುತ್ತಿರುವ ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ, ‘‘ನಿರ್ಣಾಯಕ ಕ್ರಮ’’ವನ್ನು ತೆಗೆದುಕೊಳ್ಳಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ಸೋಮವಾರ ಪ್ರತಿಪಕ್ಷ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಲೋಕಸಭೆ ಪುನರಾರಂಭಗೊಳ್ಳುತ್ತಿದ್ದಂತೆಯೇ, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಅದು ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧದ ತಮ್ಮ ಪ್ರತಿಭಟನೆಯನ್ನು ಪ್ರತಿಪಕ್ಷ ಸಂಸದರು ತೀವ್ರಗೊಳಿಸಿದರು. ಪ್ರತಿಪಕ್ಷಗಳ ಆಸನಗಳಿಂದ ಬರುತ್ತಿರುವ ದೊಡ್ಡ ಧ್ವನಿಯ ಘೋಷಣೆಗಳ ಹೊರತಾಗಿಯೂ ಪ್ರಶ್ನೋತ್ತರ ಅವಧಿಯನ್ನು ಸ್ಪೀಕರ್ ಮುಂದುವರಿಸಿದರು.
ಆಗ ಮಧ್ಯಪ್ರವೇಶಿಸಿದ ಬಿರ್ಲಾ, ಪ್ರತಿಭಟನಾನಿರತ ಸಂಸದರಿಗೆ ಕಠಿಣ ಎಚ್ಚರಿಕೆ ನೀಡಿದರು. ‘‘ಘೋಷಣೆ ಕೂಗಲು ನೀವು ಬಳಸುತ್ತಿರುವ ಶಕ್ತಿಯನ್ನು ಪ್ರಶ್ನೆ ಕೇಳಲು ಬಯಸಿದರೆ, ಅದರಿಂದ ಈ ದೇಶದ ಜನರಿಗೆ ಅನುಕೂಲವಾಗುತ್ತದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲು ಜನರು ನಿಮ್ಮನ್ನು ಇಲ್ಲಿಗೆ ಕಳುಹಿಸಿಲ್ಲ. ನಾನು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ ಮತ್ತು ಎಚ್ಚರಿಕೆ ನೀಡುತ್ತಿದ್ದೇನೆ. ಯಾರಾದರೂ ಸರಕಾರಿ ಸೊತ್ತಿಗೆ ಹಾನಿ ಮಾಡಲು ಪ್ರಯತ್ನಿಸಿದರೆ, ನಾನು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಜನರು ಗಮನಿಸುತ್ತಿದ್ದಾರೆ’’ ಎಂದು ಹೇಳಿದರು.







