Deepfake ನಿಯಂತ್ರಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ

Photo Credit : PTI
ಹೊಸದಿಲ್ಲಿ, ಡಿ. 6: ಡೀಪ್ ಫೇಕ್ ಅನ್ನು ನಿಯಂತ್ರಿಸಲು ಸ್ಪಷ್ಟ ಕಾನೂನು ಚೌಕಟ್ಟು ಕೋರಿ ಖಾಸಗಿ ಸದಸ್ಯರ ಮಸೂದೆಯೊಂದನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಡೀಕ್ಪೇಕ್ ನಿಯಂತ್ರಣ ಮಸೂದೆಯನ್ನು ಶಿವಸೇನೆಯ ನಾಯಕ ಶ್ರೀಕಾಂತ್ ಶಿಂದೆ ಸದನದಲ್ಲಿ ಶುಕ್ರವಾರ ಮಂಡಿಸಿದರು. ಡೀಪ್ ಫೇಕ್ ನಲ್ಲಿ ಯಾರೊಬ್ಬರ ಚಿತ್ರವನ್ನು ರಚಿಸುವ ಮೊದಲು ಅನುಮತಿ ಪಡೆಯುವ ಮೂಲಕ ಜನರನ್ನು ರಕ್ಷಿಸುವುದು ಇದರ ಗುರಿಯಾಗಿದೆ.
ಕಿರುಕುಳ, ವಂಚನೆ ಹಾಗೂ ಸುಳ್ಳು ಮಾಹಿತಿಯನ್ನು ಹರಡಲು ಡೀಪ್ ಫೇಕ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆದುದರಿಂದ ಕಠಿಣ ನಿಯಮಗಳನ್ನು ತುರ್ತಾಗಿ ಜಾರಿಗೊಳಿಸಬೇಕಾದ ಅಗತ್ಯತೆ ಇದೆ ಎಂದು ಶಿಂಧೆ ಹೇಳಿದ್ದಾರೆ.
ಕೆಟ್ಟ ಉದ್ದೇಶದಿಂದ ಡಿಫೇಕ್ ಅಂಶಗಳನ್ನು ಸೃಷ್ಟಿಸುವ ಹಾಗೂ ಹಂಚಿಕೊಳ್ಳುವ ಅಪರಾಧಿಗಳಿಗೆ ವಿಧಿಸುವ ದಂಡಗಳ ಪಟ್ಟಿಯನ್ನು ಕೂಡ ಈ ಮಸೂದೆ ಒಳಗೊಂಡಿದೆ.
ಕೃತಕ ಬುದ್ಧಿಮತ್ತೆ, ಡೀಪ್ ಲರ್ನಿಂಗ್, ಡೀಪ್ ಫೇಕ್ ತಂತ್ರಜ್ಞಾನದಲ್ಲಿನ ಸುಧಾರಣೆಯು ಮಾಧ್ಯಮಗಳನ್ನು ನಿಯಂತ್ರಿಸಲು ಪ್ರಮುಖ ಸಾಧನವಾಗಿ ಮಾರ್ಪಟ್ಟಿದೆ. ಈ ತಂತ್ರಜ್ಞಾನವನ್ನು ಶಿಕ್ಷಣ, ಮನರಂಜನೆ ಹಾಗೂ ಸೃಜನಶೀಲ ಕೆಲಸಗಳಲ್ಲಿ ಬಳಸಬಹುದು. ಆದರೆ, ದುರ್ಬಳಕೆ ಮಾಡಿಕೊಂಡರೆ ಅದು ವೈಯುಕ್ತಿಕ ಖಾಸಗಿತನ, ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ನಂಬಿಕೆ ಮೇಲೆ ಪರಿಣಾಮ ಬೀರುವ ಮೂಲಕ ಗಂಭೀರ ಹಾನಿ ಉಂಟು ಮಾಡುತ್ತದೆ ಎಂದು ಶಿಂಧೆ ಹೇಳಿದ್ದಾರೆ.
ಪ್ರಸ್ತಾವಿತ ಮಸೂದೆಯು ಭಾರತದಲ್ಲಿ ಡೀಪ್ ಫೇಕ್ ನ ಸೃಷ್ಟಿ, ವಿತರಣೆ ಹಾಗೂ ಅನ್ವಯವನ್ನು ನಿಭಾಯಸಲು ಸ್ಪಷ್ಟ ಕಾನೂನು ಚೌಕಟ್ಟನ್ನು ಸ್ಥಾಪಿಸುವಂತೆ ಪ್ರಸ್ತಾವಿತ ಮಸೂದೆ ಕೋರಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಸೂದೆ ಡೀಪ್ ಫೇಕ್ ಕಾರ್ಯಪಡೆಯನ್ನು ಸ್ಥಾಪಿಸುವ ಗುರಿಯನ್ನು ಕೂಡ ಹೊಂದಿದೆ. ಇದು ರಾಷ್ಟ್ರೀಯ ಭದ್ರತಾ ಅಪಾಯವನ್ನು ನಿಭಾಯಿಸುತ್ತದೆ. ಡೀಪ್ ಫೇಕ್ ಗಳು ಗೌಪ್ಯತೆ, ಸಾರ್ವಜನಿಕ ಭಾಗವಹಿಸುವಿಕೆ ಹಾಗೂ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡುತ್ತದೆ ಎಂದು ಶಿಂಧೆ ಹೇಳಿದ್ದಾರೆ.







