ಲೋಕಸಭಾ ಚುನಾವಣೆ | ಒಟ್ಟು ಚುನಾವಣಾ ವೆಚ್ಚದ ಶೇ. 45ರಷ್ಟನ್ನು ವ್ಯಯಿಸಿದ ಬಿಜೆಪಿ!
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ

PC : PTI
ಹೊಸದಿಲ್ಲಿ: ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಹಾಗೂ ಏಕಕಾಲದಲ್ಲಿ ನಡೆದ ನಾಲ್ಕು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 32 ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಪೈಕಿ ಬಿಜೆಪಿಯು ಗರಿಷ್ಠ ದೇಣಿಗೆಗಳನ್ನು ಸ್ವೀಕರಿಸಿತ್ತು ಹಾಗೂ ಅತ್ಯಧಿಕ ಹಣವನ್ನು ವ್ಯಯಿಸಿತ್ತು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್)ವು ಶುಕ್ರವಾರ ಪ್ರಕಟಿಸಿದ ವರದಿ ತಿಳಿಸಿದೆ.
ರಾಜಕೀಯ ಪಕ್ಷಗಳು ಸ್ವೀಕರಿಸಿದ ಒಟ್ಟು 7445.56 ಕೋಟಿ ರೂ. ದೇಣಿಗೆಗಳ ಪೈಕಿ ಬಿಜೆಪಿಗೆ 6,268 ಕೋಟಿ ರೂ.ಪಡೆದಿದ್ದು, ಇದು ಎಲ್ಲಾ ರಾಜಕೀಯ ಪಕ್ಷಗಳು ಗಳಿಸಿರುವ ಒಟ್ಟು ದೇಣಿಗೆಯ ಶೇ.84.18ರಷ್ಟಾಗಿದೆ. ಪ್ರಮುಖ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಪಕ್ಷವು 592.48 ಕೋಟಿ ರೂ. ದೇಣಿಗೆಯನ್ನು ಪಡೆದಿದ್ದು, ದ್ವಿತೀಯ ಸ್ಥಾನದಲ್ಲಿದೆ. ಇದು ಎಲ್ಲಾ ರಾಜಕೀಯ ಪಕ್ಷಗಳ ಒಟ್ಟು ದೇಣಿಗೆಯ ಶೇ.7.96ರಷ್ಟಾಗಿದೆ. ಐದು ರಾಷ್ಟ್ರೀಯ ಪಕ್ಷಗಳು 6930.24 ಕೋಟಿ ರೂ. (93.08 ಶೇ.) ದೇಣಿಗೆಗಳನ್ನು ಪಡೆದರೆ, ಪ್ರಾದೇಶಿಕ ಪಕ್ಷಗಳು 515.32 ಕೋಟಿ ರೂ. (6.92 ಶೇ.) ಗಳಿಸಿವೆ.
ವೈಎಸ್ಆರ್-ಕಾಂಗ್ರೆಸ್ 171.753 ಕೋಟಿ ರೂ. (2.31 ಶೇ.), ತೆಲುಗುದೇಶಂ 107.93 ಕೋಟಿ ರೂ. (1.45 ಶೇ.) ದೇಣಿಗೆಗಳನ್ನು ಪಡೆದಿದ್ದು, ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆೆ. ಸಿಪಿಐ (ಎಂ)ಗೆ 62.74 ಕೋಟಿ ರೂ. (0.84 ಶೇ.) ದೇಣಿಗೆ ದೊರೆತಿದೆ.
ುನಾವಣಾ ವೆಚ್ಚದಲ್ಲಿಯೂ ಬಿಜೆಪಿಯು ಆಗ್ರಸ್ಥಾನದಲ್ಲಿದೆ. ಚುನಾವಣೆಗಳಿಗಾಗಿ ಬಿಜೆಪಿಯು 1,493.91 ಕೋಟಿ ರೂ. ಖರ್ಚು ಮಾಡಿದೆ. ಇದು ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚ (3,352.81 ಕೋಟಿ ರೂ.)ದ ಶೇ.44.56ರಷ್ಟು ಆಗಿದೆ. ಕಾಂಗ್ರೆಸ್ 620.14 ಕೋಟಿ ರೂ. (18.50 ಶೇ.) ವೆಚ್ಚ ಮಾಡಿದ್ದು , ತೀರಾ ದೂರದಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ರಾಷ್ಟ್ರೀಯ ಪಕ್ಷಗಳು 2204.31 ಕೋಟಿ ರೂ. (65.75 ಶೇ.) ವೆಚ್ಚ ಮಾಡಿದ್ದರೆ, ಪ್ರಾದೇಶಿಕ ಪಕ್ಷಗಳು 1148.49 ಕೋಟಿ ರೂ. (34.25 ಶೇ) ಖರ್ಚು ಮಾಡಿರುತ್ತವೆ. ವೈಎಸ್ಆರ್ ಕಾಂಗ್ರೆಸ್ 325.67 ಕೋಟಿ ರೂ. (9.71 ಶೇ.),ಬಿಜೆಡಿ 278.03 ಕೋಟಿ (8.29 ಶೇ.) ಹಾಗೂ ತೃಣಮೂಲ ಕಾಂಗ್ರೆಸ್ 147.68 ಕೋಟಿ ರೂ. (4.40 ಶೇ.)ಚುನಾವಣೆಗೆ ಅತ್ಯಧಿಕ ವೆಚ್ಚ ಮಾಡಿರು ಇತರ ಪ್ರಮುಖ ಪಕ್ಷಗಳಾಗಿವೆ.
ಲೋಕಸಭಾ ಚುನಾವಣೆ ನಡೆದ 90 ದಿನಗಳೊಳಗೆ ಹಾಗೂ ವಿಧಾನಸಭಾ ಚುನಾವಣೆ ನಡೆದ 75 ದಿನಗಳೊಳಗೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ವೆಚ್ಚಗಳ ವರದಿಗಳನ್ನು ಕಡ್ಡಾಯವಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಆದರೆ ಎಎಪಿಯ ತನ್ನ ಚುನಾವಣಾ ವೆಚ್ಚದ ವರದಿಯನ್ನು 168 ದಿನ ತಡವಾಗಿ ಸಲ್ಲಿಸಿದರೆ, ಬಿಜೆಪಿಯು 139 ಹಾಗೂ 154 ದಿನಗಳ ನಡುವೆ ಸಲ್ಲಿಸಿದೆ.







