ಏಳು ಐಷಾರಾಮಿ ಬಿಎಂಡಬ್ಲ್ಯೂ ಕಾರುಗಳಿಗೆ ಟೆಂಡರ್ ಕರೆದ ಲೋಕ್ ಪಾಲ್!

Photo credit : lokpal.gov.in
ಹೊಸದಿಲ್ಲಿ: ಭಾರತದ ಉನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಪಾಲ್ ಏಳು ಐಷಾರಾಮಿ ಬಿಎಂಡಬ್ಲ್ಯೂ ಕಾರು ಖರೀದಿಗೆ ಟೆಂಡರ್ ಆಹ್ವಾನಿಸಿದ್ದು, ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕ್ ಪಾಲ್ ಸಂಸ್ಥೆಯ ಈ ಟೆಂಡರ್ ಪ್ರಕ್ರಿಯೆಯಲ್ಲೇ ಭ್ರಷ್ಟಾಚಾರ ನಡೆದಿದೆ ಎಂಬ ಸಂಶಯಗಳು ವ್ಯಕ್ತವಾಗಿವೆ.
ಅಕ್ಟೋಬರ್ 16ರಂದು ಟೆಂಡರ್ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕ್ ಪಾಲ್, “ಏಳು ಬಿಎಂಡಬ್ಲ್ಯೂ 330ಎಲ್ಐ ಸ್ಪೋರ್ಟ್ ಕಾರು ಖರೀದಿಗಾಗಿ ತಾಂತ್ರಿಕ ಮತ್ತು ಹಣಕಾಸು ಟೆಂಡರ್ ಅನ್ನು ಆಹ್ವಾನಿಸಲಾಗಿದೆ” ಎಂದು ಹೇಳಿದೆ.
ಈ ಟೆಂಡರ್ ಪ್ರಕಟನೆ ತಕ್ಷಣವೇ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದು, ನಾಗರಿಕರು ಹಾಗೂ ವಿಪಕ್ಷಗಳೆರಡರಿಂದಲೂ ಟೀಕೆಗೊಳಗಾಗಿದೆ.
ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ವಕ್ತಾರೆ ಡಾ. ಶಮ ಮುಹಮ್ಮದ್, “ಕಾಂಗ್ರೆಸ್ ಸರಕಾರವನ್ನು ಕೆಳಗಿಳಿಸಲು ಸ್ಥಾಪಿಸಲಾದ ಈ ಸಂಸ್ಥೆಯು ಕಾಗದದ ಮೇಲೆ ಮಾತ್ರ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತಿದೆ” ಎಂದು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಮಾ ಮುಹಮ್ಮದ್, “ಕಾಂಗ್ರೆಸ್ ಸರಕಾರವನ್ನು ಕೆಳಗಿಳಿಸಲೆಂದೇ ರೂಪಿಸಲಾಗಿದ್ದ ಆರೆಸ್ಸೆಸ್ ಬೆಂಬಲಿತ “ಇಂಡಿಯಾ ಅಗೈನ್ಸ್ಟ್ ಕರಪ್ಷನ್” ಹೋರಾಟದ ನಂತರ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅಸ್ತಿತ್ವಕ್ಕೆ ಬಂದಿದ್ದ ಸಂಸ್ಥೆ ಇದೇ ಆಗಿದೆ. ಈ ಹೋರಾಟದಿಂದ ನರೇಂದ್ರ ಮೋದಿ ಪ್ರಧಾನಿಯಾದರು ಹಾಗೂ ಅವರು ತೆರಿಗೆದಾರರ ಹಣವನ್ನು ಮೋಜು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳಿಂದ ತುಂಬಿರುವ ಕಾಗದದಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಲೋಕ್ ಪಾಲ್ ಸಂಸ್ಥೆಯನ್ನು ಜಾರಿಗೆ ತಂದರು” ಎಂದು ಚಾಟಿ ಬೀಸಿದ್ದಾರೆ.
ಹೋರಾಟಗಾರ ಹಾಗೂ ಇಂಡಿಯಾ ಅಗೈನ್ಸ್ಟ್ ಕರಪ್ಷನ್ ಹೋರಾಟದ ನಾಯಕರಾಗಿದ್ದ ಪ್ರಶಾಂತ್ ಭೂಷಣ್ ಕೂಡಾ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಹಲವಾರು ವರ್ಷಗಳಿಂದ ಲೋಕ್ ಪಾಲ್ ಹುದ್ದೆಗಳನ್ನು ಖಾಲಿ ಇರಿಸುವ ಮೂಲಕ, ನರೇಂದ್ರ ಮೋದಿ ನೇತೃತ್ವದ ಸರಕಾರ ಈ ಸಂಸ್ಥೆಯನ್ನು ಧೂಳು ಹಿಡಿಸಿತ್ತು. ಬಳಿಕ, ಭ್ರಷ್ಟಾಚಾರದ ಬಗ್ಗೆ ಯಾವ ಕಾಳಜಿಯೂ ಇಲ್ಲದ ಮತ್ತು ತಮ್ಮ ಐಷಾರಾಮಿ ಬದುಕಿನಿಂದ ಸಂತುಷ್ಟರಾಗಿರುವ ಪರಾವಲಂಬಿ ಸದಸ್ಯರನ್ನು ನೇಮಿಸಿತು. ಇದೀಗ ಅವರು ಅವರು ತಲಾ 70 ಲಕ್ಷ ರೂ. ಮೌಲ್ಯದ ಕಾರುಗಳನ್ನು ತಮಗಾಗಿ ಖರೀದಿಸುತ್ತಿದ್ದಾರೆ!” ಎಂದು ಟೀಕಾಪ್ರಹಾರ ನಡೆಸಿದ್ದಾರೆ.







