5 ಕೋಟಿ ರೂ. ಮೌಲ್ಯದ 7 ಬಿಎಂಡಬ್ಲ್ಯು ಕಾರು ಖರೀದಿಸಲ್ಲ; ಟೆಂಡರ್ ರದ್ದುಗೊಳಿಸಿದ ಲೋಕಪಾಲ್

ಸಾಂದರ್ಭಿಕ ಚಿತ್ರ | Photo Credit :PTI
ಹೊಸದಿಲ್ಲಿ, ಜ. 1: ಒಟ್ಟು ಸುಮಾರು 5 ಕೋ. ರೂ. ಮೌಲ್ಯದ 7 ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸುವ ವಿವಾದಾತ್ಮಕ ಟೆಂಡರ್ ಅನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ 2 ತಿಂಗಳ ಬಳಿಕ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ಐಷಾರಾಮಿ ಕಾರುಗಳನ್ನು ಖರೀದಿಸುವ ಲೋಕಪಾಲ್ನ ನಿರ್ಧಾರವನ್ನು ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಹೋರಾಟಗಾರರು ಟೀಕಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಪಾಲ್ ತನ್ನ ಪೂರ್ಣ ಪೀಠದ ನಿರ್ಣಯದ ಬಳಿಕ ಖರೀದಿ ಪ್ರಸ್ತಾವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಅನಂತರ 2025 ಡಿಸೆಂಬರ್ 25ರಂದು ತಿದ್ದುಪಡಿ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಪಾಲ್ 2025 ಅಕ್ಟೋಬರ್ 16ರಂದು 7 ಬಿಎಂಡಬ್ಲ್ಯು 3 ಸಿರೀಸ್ 33ಎಲ್ಐ ಕಾರುಗಳ ಪೂರೈಕೆಗೆ ಪ್ರತಿಷ್ಠಿತ ಕಂಪೆನಿಗಳಿಂದ ಟೆಂಡರ್ಗಳನ್ನು ಆಹ್ವಾನಿಸಿತ್ತು.
ಲೋಕಪಾಲ್ ಅಧ್ಯಕ್ಷರು ಮತ್ತು ಅದರ ಆರು ಸದಸ್ಯರಿಗೆ ತಲಾ ಒಂದು ಬಿಎಂಡಬ್ಲ್ಯು ಕಾರನ್ನು ಒದಗಿಸುವ ಉದ್ದೇಶವನ್ನು ಈ ಖರೀದಿ ಹೊಂದಿತ್ತು. ಪ್ರಸ್ತುತ ಲೋಕಪಾಲ್ನ ನೇತೃತ್ವವನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ (ನಿವೃತ್ತ) ವಹಿಸಿದ್ದಾರೆ.
ಇದು ಒಬ್ಬ ಅಧ್ಯಕ್ಷರನ್ನು ಹೊಂದಿದ್ದು, 8 ಸದಸ್ಯರನ್ನು ಹೊಂದಬಹುದು. ಇವರಲ್ಲಿ ನಾಲ್ವರು ನ್ಯಾಯಾಂಗ ಹಾಗೂ ನಾಲ್ವರು ಇತರ ಸದಸ್ಯರು ಸೇರಿರುತ್ತಾರೆ.







