ವಿಮಾನ ದುರಂತ | ಪತ್ನಿಯ ಚಿತಾಭಸ್ಮ ವಿಸರ್ಜನೆಗೆ ಬಂದ ಲಂಡನ್ ನಿವಾಸಿ ವಿಮಾನ ದುರಂತದಲ್ಲಿ ಮೃತ್ಯು; ಅನಾಥವಾದ ಇಬ್ಬರು ಮಕ್ಕಳು

PC : PTI
ಹೊಸದಿಲ್ಲಿ : ಲಂಡನ್ ನಿವಾಸಿ ಅರ್ಜುನ್ ಭಾಯಿ ಮನುಭಾಯಿ ಪಟೋಲಿಯಾ ಅವರ ಪತ್ನಿ ಕೆಲವೇ ವಾರಗಳ ಹಿಂದೆ ಇಂಗ್ಲೆಂಡ್ನಲ್ಲಿ ಸಾವನ್ನಪ್ಪಿದ್ದರು. ಆಕೆಯ ಪಾರ್ಥಿವ ಶರೀರದ ಚಿತಾಭಸ್ಮವನ್ನು ಅಮ್ರೇಲಿ ಜಿಲ್ಲೆಯಲ್ಲಿರುವ ತನ್ನ ಪೂರ್ವಿಕರ ಗ್ರಾಮವಾದ ವಾಡಿಯಾದಲ್ಲಿ ವಿಸರ್ಜಿಸುವುದಕ್ಕಾಗಿ ಅರ್ಜುನ್ ಭಾಯಿ ಅವರು ಗುಜರಾತ್ ಗೆ ಆಗಮಿಸಿದ್ದರು. 8 ಹಾಗೂ 4 ವರ್ಷ ವಯಸ್ಸಿನ ಇಬ್ಬರು ಪುತ್ರಿಯರನ್ನು ಲಂಡನ್ ನಲ್ಲಿಯೇ ಬಿಟ್ಟು ಅವರು ಊರಿಗೆ ಬಂದಿದ್ದರು.
ಪತ್ನಿಯ ಇಚ್ಚೆಯಂತೆ ಆಕೆಯ ಚಿತಾಭಸ್ಮವನ್ನು ಗ್ರಾಮದ ಕೆರೆ ಹಾಗೂ ನದಿಯಲ್ಲಿ ವಿಸರ್ಜಿಸಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಬಳಿಕ ಅವರು ಲಂಡನ್ಗೆ ವಾಪಾಸಾಗಲು ಏರ್ ಇಂಡಿಯಾ ವಿಮಾನವನ್ನು ಹತ್ತಿದ್ದರು. ಆದರೆ ವಿಧಿ ಬೇರೇಯೇ ಬಗೆದಿತ್ತು. ಅಹ್ಮದಾಬಾದ್ ನಲ್ಲಿ ಅವರಿದ್ದ ಏರ್ಇಂಡಿಯಾ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಇತರ 240ಕ್ಕೂ ಅಧಿಕ ಮಂದಿಯೊಂದಿಗೆ ಅವರೂ ಸಾವನ್ನಪ್ಪಿದ್ದರು.
ಇತ್ತ ಲಂಡನ್ ನಲ್ಲಿ ತಮ್ಮ ತಂದೆಗಾಗಿ ಕಾಯುತ್ತಿರುವ ಇಬ್ಬರು ಹೆಣ್ಣು ಮಕ್ಕಳಿಗೆ, ಕೇವಲ ಒಂದು ವಾರದ ಅವಧಿಯಲ್ಲಿ ತಾವು ಇಬ್ಬರು ಪಾಲಕರನ್ನೂ ಕಳೆದುಕೊಂಡಿದ್ದೇವೆಯೆಂಬ ಘೋರ ಸತ್ಯವು ಇನ್ನೂ ಕೂಡಾ ತಿಳಿದುಬಂದಿಲ್ಲ. ಸದ್ಯಕ್ಕೆ ಅಲ್ಲಿ ಯಾವುದೇ ಹತ್ತಿರ ಬಂಧುಗಳು ಇಲ್ಲದೆ ಇರುವುದರಿಂದ ಅವರ ಭವಿಷ್ಯ ಅತಂತ್ರವಾಗಿದೆ.





