PSLV-C62 ವೈಫಲ್ಯದ ನಡುವೆಯೂ ಬಾಹ್ಯಾಕಾಶದಿಂದ ದತ್ತಾಂಶವನ್ನು ರವಾನಿಸಿದ ಏಕೈಕ ಜೀವಂತ ಸ್ಪಾನಿಶ್ ಉಪಗ್ರಹ!

Photo Credit : Orbital Paradigm
ಹೊಸದಿಲ್ಲಿ: ಇಸ್ರೊದ ಪಿಎಸ್ಎಲ್ವಿ-ಸಿ62 ರಾಕೆಟ್ ವೈಫಲ್ಯಕ್ಕೆ ತಿರುವೊಂದು ದೊರೆತಿದ್ದು, ಸ್ಪೇನ್ನ ನವೋದ್ಯಮ ಸಂಸ್ಥೆ ಆರ್ಬಿಟಲ್ ಪ್ಯಾರಾಡಿಗ್ಮ್ ತನ್ನ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್ (KID) ಉಪಗ್ರಹವು ಚಮತ್ಕಾರಕವಾಗಿ ಉಳಿದಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಉಪಗ್ರಹವು ವಿಭಜನೆ ಹಾಗೂ ಅತೀವ ಮರುಪ್ರವೇಶ ವಾತಾವರಣದ ನಡುವೆಯೂ ಜೀವಂತವಾಗುಳಿದು, ಮಹತ್ವದ ದತ್ತಾಂಶವನ್ನು ಭೂಮಿಗೆ ರವಾನಿಸಿದೆ ಎಂದು ಕಂಪನಿ ತಿಳಿಸಿದೆ.
ಪ್ರೋಟೋಟೈಪ್ ಮಾದರಿಯ 25 ಕೆಜಿ ತೂಕದ ಫುಟ್ಬಾಲ್ನಂತಹ ಈ ಉಪಗ್ರಹವು, ಜನವರಿ 12ರಂದು ವಿಫಲಗೊಂಡ ಪಿಎಸ್ಎಲ್ವಿ-ಸಿ62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ಕಾಣಿಸಿಕೊಂಡ ವೈಫಲ್ಯದ ನಡುವೆಯೂ, ನಾಲ್ಕನೇ ಹಂತದಲ್ಲಿ ಯಶಸ್ವಿಯಾಗಿ ವಿಭಜನೆಗೊಂಡು ತನ್ನ ಕಕ್ಷೆಯನ್ನು ಸೇರಿದೆ ಎಂದು ಹೇಳಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್ಬಿಟಲ್ ಪ್ಯಾರಾಡಿಗ್ಮ್, “ಪಿಎಸ್ಎಲ್ವಿ-ಸಿ62 ಮೂಲಕ ಉಡಾವಣೆಗೊಂಡಿದ್ದ ನಮ್ಮ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್ ಉಪಗ್ರಹವು ಸ್ವಿಚ್ ಆನ್ ಆಗಿದ್ದು, ಮೂರಕ್ಕಿಂತ ಹೆಚ್ಚು ನಿಮಿಷಗಳ ಕಾಲ ದತ್ತಾಂಶವನ್ನು ರವಾನಿಸಿದೆ. ನಾವು ಉಪಗ್ರಹದ ಪಥವನ್ನು ಮರುನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ಉಪಗ್ರಹವು ಗರಿಷ್ಠ ಪ್ರಮಾಣದ ಉಷ್ಣಾಂಶ ಹಾಗೂ ಗರಿಷ್ಠ ಪ್ರಮಾಣದ ಜಿ-ಹೊರೆಯನ್ನು (28ಜಿ ದಾಖಲಾಗಿದೆ) ತಾಳಿಕೊಂಡಿದ್ದು, ಉಪಗ್ರಹದ ಒಳಭಾಗದಲ್ಲಿ ಉಷ್ಣತೆ ಉಳಿದಿದೆ. ಸಂಪೂರ್ಣ ವರದಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದೆ.







