ಲುಕೌಟ್ ಸರ್ಕುಲ್ಯರ್ : ಭಾರತ್ ಪೆ ಸಹ-ಸಂಸ್ಥಾಪಕ, ಪತ್ನಿಗೆ ವಿದೇಶ ಪ್ರಯಾಣಕ್ಕೆ ತಡೆ

ಅಶ್ನೀರ್ ಗ್ರೋವರ್ , ಮಾಧುರಿ ಜೈನ್ | Photo: NDTV
ಹೊಸದಿಲ್ಲಿ : ದಿಲ್ಲಿ ಪೊಲೀಸ್ ಆರ್ಥಿಕ ಅಪರಾಧಗಳ ದಳ (EOW) ಲುಕೌಟ್ ಸರ್ಕ್ಯುಲರ್ (LOC) ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಭಾರತ್ ಪೆ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ಹಾಗೂ ಅವರ ಪತ್ನಿ ಮಾಧುರಿ ಜೈನ್ ಅವರ ವಿದೇಶ ಪ್ರಯಾಣಕ್ಕೆ ಇಲ್ಲಿನ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಶುಕ್ರವಾರ ತಡೆ ಒಡ್ಡಲಾಯಿತು.
ವಿದೇಶಕ್ಕೆ ಪ್ರಯಾಣಿಸುವುದನ್ನು ತಡೆಯಲು ಎಲ್ಒಸಿ ಜಾರಿಗೊಳಿಸಲಾಗಿದೆ. ಮುಂದಿನ ವಾರದಿಂದ ಮಂದಿರ್ ಮಾರ್ಗ್ ನ ಇಒಸಿ ಕಚೇರಿಯಲ್ಲಿ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಜಂಟಿ ಆಯುಕ್ತ (EOW) ಸಿಂಧು ಪಿಳ್ಳೈ ಹೇಳಿದ್ದಾರೆ.
ಭದ್ರತಾ ಪರಿಶೀಲನೆಯ ಸ್ಥಳದಲ್ಲಿ ಇಬ್ಬರನ್ನೂ ತಡೆದು ನಿಲ್ಲಿಸಲಾಗಿದೆ. ಅಲ್ಲದೆ, ನಿವಾಸಕ್ಕೆ ಹಿಂದಿರುಗಿ ಮುಂದಿನ ವಾರ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪಿಳ್ಳೈ ತಿಳಿಸಿದ್ದಾರೆ.
ಫಿನ್ಟೆಕ್ ಕಂಪೆನಿಗೆ ತಾವು ಮಾಡದ ಕೆಲಸಕ್ಕಾಗಿ ಹಿಂದಿನ ದಿನಾಂಕದ ಇನ್ವಾಯ್ಸ್ ಅನ್ನು ಬಳಸಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ ಆರೋಪದಲ್ಲಿ ಇವರಿಬ್ಬರ ವಿರುದ್ಧ ಎಲ್ಒಸಿ ನೋಟಿಸ್ ಜಾರಿಗೊಳಿಸಲಾಗಿದೆ. ದಾಖಲೆಗಳಲ್ಲಿ ಕಾಣುವಂತೆ ಮಾರಾಟಗಾರರಿಗೆ ಮಾಡಲಾದ ಹಲವು ಪಾವತಿಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಇಒಸಿ ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಗ್ರೋವರ್, ಮೇಯಲ್ಲಿ ಎಫ್ಐಆರ್ ದಾಖಲಿಸಿದ ದಿನದಿಂದ ಶುಕ್ರವಾರ 8 ಗಂಟೆ ವರೆಗೆ ತಾನು ಇಒಡಬ್ಲ್ಯುನಿಂದ ಯಾವುದೇ ಸಮನ್ಸ್ ಸ್ವೀಕರಿಸಿಲ್ಲ ಎಂದಿದ್ದಾರೆ.







