ಲೈಂಗಿಕ ಒಪ್ಪಿಗೆಗೆ ವಯೋಮಿತಿ ಇಳಿಕೆ ಅಸಾಧ್ಯ: ಸುಪ್ರೀಂಕೋರ್ಟ್ ಗೆ ಕೇಂದ್ರ ಸ್ಪಷ್ಟನೆ

ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನವರನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವ ಸಲುವಾಗಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ನೀಡುವ ಕನಿಷ್ಠ ವಯಸ್ಸನ್ನು 18 ಎಂದು ನಿಗದಿಪಡಿಸಲಾಗಿದ್ದು, ವಯೋಮಿತಿಯನ್ನು ಇಳಿಸುವುದು ಅಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಆದರೆ ಪ್ರೌಢಾವಸ್ಥೆಯ ಪ್ರಣಯ ಮತ್ತು ದೈಹಿಕ ಸಂಪರ್ಕ ಪ್ರಕರಣಗಳಲ್ಲಿ ಆಯಾ ಪ್ರಕರಣಕ್ಕೆ ಅನ್ಯವಾಗುವಂತೆ ಸುಪ್ರೀಂಕೋರ್ಟ್ ತನ್ನ ವಿವೇಚನೆಯನ್ನು ಬಳಸಬಹುದಾಗದೆ ಎಂದು ಸ್ಪಷ್ಟಪಡಿಸಿದೆ.
"ಶಾಸನಬದ್ಧವಾಗಿ ಲೈಂಗಿಕತೆಗೆ ಒಪ್ಪಿಗೆ ನೀಡುವ ವಯಸ್ಸನ್ನು 18 ಎಂದು ನಿಗದಿಪಡಿಸಲಾಗಿದ್ದು, ಇದನ್ನು ಸಮಾನವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ. ಸುಧಾರಣೆ ಅಥವಾ ಪ್ರೌಢರಿಗೆ ಸ್ವಾಯತ್ತತೆ ನೀಡುವ ಹೆಸರಿನಲ್ಲಿ ಈ ಮಾನದಂಡದಿಂದ ವಿಮುಖವಾದಲ್ಲಿ, ಮಕ್ಕಳ ರಕ್ಷಣಾ ಕಾನೂನುಗಳ ಪ್ರಗತಿಯಲ್ಲಿ ದಶಕಗಳಷ್ಟು ಹಿನ್ನಡೆಯಾಗುತ್ತದೆ ಮತ್ತು ಪೋಕ್ಸೋ ಕಾಯ್ದೆ ಮತ್ತು ಬಿಎನ್ಎಸ್ ನ ಮೂಲ ಉದ್ದೇಶವನ್ನೇ ಕಡೆಗಣಿಸಿದಂತಾಗುತ್ತದೆ" ಎಂದು ಅಭಿಪ್ರಾಯಪಟ್ಟಿದೆ.
ಲೈಂಗಿಕ ಚಟುವಟಿಕೆಗಳಿಗೆ ಮಾಹಿತಿಯುಕ್ತ ಮತ್ತು ಅಧಿಕೃತ ಒಪ್ಪಿಗೆ ನೀಡಲು 18ಕ್ಕಿಂತ ಕೆಳ ವಯಸ್ಸಿನವರು ಅಸಮರ್ಥರು ಎನ್ನುವ ಕಾನೂನಾತ್ಮಕ ತರ್ಕವನ್ನು ಸಂವಿಧಾನಾತ್ಮಕ ಚೌಕಟ್ಟು ಬೆಂಬಲಿಸಿದೆ. ವಯೋ ಆಧರಿತ ರಕ್ಷಣೆಯನ್ನು ಸಡಿಲಗೊಳಿಸುವುದು ಪರಸ್ಪರ ಸಮ್ಮತಿಯ ಹೆಸರಿನಲ್ಲಿ ಅತ್ಯಾಚಾರದಂಥ ಪ್ರಕರಣಗಳಿಗೆ ದಾರಿಯಾಗುತ್ತದೆ ಎಂದು ಹೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಈ ಸಂಬಂಧ ಸಮಗ್ರ ಲಿಖಿತ ಹೇಳಿಕೆಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದಾರೆ. ಭಾರತೀಯ ದಂಡಸಂಹಿತೆ-1860ರಲ್ಲಿ ಇದ್ದ 10 ವರ್ಷದ ಮಿತಿಯನ್ನು 1891ರಲ್ಲಿ 12ಕ್ಕೆ, 1925ರಲ್ಲಿ 14 ವರ್ಷಕ್ಕೆ, 1940ರ ಐಪಿಸಿ ತಿದ್ದುಪಡಿಯಲ್ಲಿ 16ಕ್ಕೆ ಮತ್ತು 1978ರ ಬಾಲ್ಯ ವಿವಾಹ ತಡೆ ಕಾಯ್ದೆಯಲ್ಲಿ 18 ವರ್ಷಕ್ಕೆ ಏರಿಸಲಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.







