ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ ಹೊಟೇಲ್ ಗಳಿಗೆ LPG ಕೊರತೆಯ ಬಿಸಿ

Photo : gemini AI
ಮುಂಬೈ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಾಣಿಜ್ಯ ಬಳಕೆಯ ಎಲ್ಪಿಜಿಯ ತೀವ್ರ ಕೊರತೆಯ ಬಿಸಿ ಆತಿಥ್ಯ ವಲಯಕ್ಕೆ ತಟ್ಟಿದ್ದು, ಒಂದು ವೇಳೆ ಅಡುಗೆ ಅನಿಲ ಪೂರೈಕೆ ಸಹಜಸ್ಥಿತಿಗೆ ಬಾರದೆ ಇದ್ದಲ್ಲಿ ಒಂದೆ ದಿನಗಳಲ್ಲಿ ಹೊಟೇಲ್, ರೆಸ್ಟಾರೆಂಟ್ಗಳನ್ನು ಮುಚ್ಚಬೇಕಾದೀತೆಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಹೊಟೇಲ್ ಮಾಲಕರ ಸಂಘಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಅಡುಗೆ ಅನಿಲದ ಪೂರೈಕೆಯಲ್ಲಿನ ವ್ಯತ್ಯಯವು ಮಹಾನಗರಗಳಾದ ಮುಂಬೈ, ಚೆನ್ನೈ, ಬೆಂಗಳೂರು ಮತ್ತಿತರ ಮಹಾನಗರಗಳ ಹೊಟೇಲ್, ರೆಸ್ಟಾರೆಂಟ್ ಗಳನ್ನು ಈಗಾಗಲೇ ಬಾಧಿಸತೊಡಗಿದೆ.
ಈ ಮಧ್ಯೆ ಕೇಂದ್ರ ಸರಕಾರವು ಎಲ್ಪಿಜಿ ಪೂರೈಕೆಯಲ್ಲಿ ಮನೆಗಳು, ಆಸ್ಪತ್ರೆಗಳಂತರ ಅತ್ಯಗತ್ಯ ವಲಯಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು ಹಾಗೂ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳ ಮೂವರು ಉನ್ನತ ಅಧಿಕಾರಿಗಳ ಸಮಿತಿಯು ಇತರ ವಲಯಗಳಿಗೆ ಎಲ್ಪಿಜಿ ಪೂರೈಕೆಯ ಕುರಿತು ಪರಾಮರ್ಶೆ ನಡೆಸಲಿದೆ.
ʼಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಒಂದೆರಡು ದಿನಗಳಲ್ಲಿ ದೇಶಾದ್ಯಂತ ಹೊಟೇಲ್, ರೆಸ್ಟಾರೆಂಟ್ಗಳ ಮುಚ್ಚುವ ಸಾಧ್ಯತೆʼ:
ದೇಶಾದ್ಯಂತ ವಾಣಿಜ್ಯ ಬಳಕೆಯ ಅಡುಗೆ ಅನಿಲದ ವ್ಯಾಪಕ ಕೊರತೆಯುಂಟಾಗಿದ್ದು, ಶೀಘ್ರದಲ್ಲೇ ಆತಿಥ್ಯವುಲಯವು ಸ್ತಬ್ಧಗೊಳ್ಳುವ ಭೀತಿಯುಂಟಾಗಿದೆಯೆಂದು ಭಾರತೀಯ ಹೊಟೇಲ್ಗಳು ಹಾಗೂ ರೆಸ್ಟಾರೆಂಟ್ಗಳ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ತಿಳಿಸಿದ್ದಾರೆ.
ಈ ಕೊರತೆಯು ಹೀಗೆಯೇ ಮುಂದುವರಿದಲ್ಲಿ ಮುಂದಿನ ಎರಡು ದಿನಗಳಲ್ಲಿ ಮುಂಬೈನ ಎಲ್ಲಾ ಹೊಟೇಲ್ಗಳನ್ನು ಮುಚ್ಚಬೇಕಾಗಿ ಬರಬಹುದು ಎಂದು ಶೆಟ್ಟಿ ತಿಳಿಸಿದ್ದಾರೆ. ಈ ಬಗ್ಗೆ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿಯವರಿಗೆ ಪತ್ರ ಬರೆಯಲಾಗಿದೆ ಹಾಗೂ ಮಹಾರಾಷ್ಟ್ರ ನಾಗರಿಕ ಪೂರೈಕೆ ಸಚಿವ ಚಗನ್ಭುಜಬಲ್ ಅವರ ಜೊತೆಗೂ ಸಂಪರ್ಕದಲ್ಲಿರುವುದಾಗಿ ಶೆಟ್ಟಿ ತಿಳಿಸಿದ್ದಾರೆ.
ಇಂದು, ಮುಂಬೈನಲ್ಲಿ ಶೇ.10ರಿಂದ 20ರಷ್ಟು ಸಂಘದ ಸದಸ್ಯರು ಎಲ್ಪಿಜಿ ಕೊರತೆಯನ್ನು ಎದುರಿಸುತ್ತಿದ್ದಾರೆ. ನಾಳೆಯ ಹೊತ್ತಿಗೆ ಅದು ಶೇ.60ಕ್ಕೆ ಏರಬಹುದು, ಮಾರನೆ ದಿನ ಶೇ.100ರಷ್ಟು ಹೊಟೇಲ್ ಬಾಧಿತವಾಗಲಿದ್ದು, ಅವುಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬರಬಹುದೆಂದು ವಿಜಯ್ ಶೆಟ್ಟಿ ತಿಳಿಸಿದ್ದಾರೆ.
‘‘ರೆಸ್ಟಾರೆಂಟ್ ಉದ್ಯಮವು ಮುಖ್ಯವಾಗಿ ತನ್ನ ಕಾರ್ಯನಿರ್ವಹಣೆಗಾಗಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಗಳನ್ನು ಅವಲಂಭಿಸಿದೆ. ಅದರಲ್ಲಿ ಉಂಟಾಗುವ ಯಾವುದೇ ವ್ಯತ್ಯಯವು ಬಹುತೇಕ ರೆಸ್ಟಾರೆಂಟ್ಗಳನ್ನು ಮುಚ್ಚುಗಡೆಗೊಳಿಸಬೇಕಾದಂತಹ ದಾರುಣ ಪರಿಸ್ಥಿತಿಗೆ ಕಾರಣವಾಗುತ್ತದೆ’’ ಎಂದು ಸಂಘವು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಪರ್ಯಾಯ ಇಂಧನಗಳಿಗೆ ಮೊರೆಹೋಗುತ್ತಿರುವ ಹೊಟೇಲ್ ಗಳು:
ಮುಂಬೈ, ಬೆಂಗಳೂರು , ಚೆನ್ನೈನಂತಹ ಮಹಾನಗರಗಳಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲದ ಪೂರೈಕೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಹೊಟೇಲ್ ಉದ್ಯಮಿಗಳ ಪ್ರತಿನಿಧಿಗಳು ದೂರಿದ್ದಾರೆ. ಇನ್ನು ಕೆಲವು ರೆಸ್ಟಾರೆಂಟ್ಗಳು ಎಲ್ಪಿಜಿಯ ಮಿತ ಬಕೆ ಮಾಡಲಾರಂಭಿಸಿದ್ದು, ಅಡುಗೆಗೆ ಕಟ್ಟಿಗೆ ಮತ್ತಿತರ ಪರ್ಯಾಯ ಇಂಧನ ಮೂಲಗಳನ್ನು ಬಳಸತೊಡಗಿದ್ದಾರೆಂದು ವರದಿಯಾಗಿದೆ.







