ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ G RAM G ಮಸೂದೆ ಅಂಗೀಕಾರ

Photo credit: PTI
ಹೊಸದಿಲ್ಲಿ: ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮರುನಾಮಕರಣ ಮಾಡುವ G RAM G ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಕುಂದುಕೊರತೆಯಿದ್ದು, ರಾಜ್ಯ ಸರಕಾರಗಳು ಕೂಲಿ ಕಾರ್ಮಿಕರ ಮೇಲೆ ಹೆಚ್ಚು ವೆಚ್ಚ ಮಾಡುತ್ತಿವೆ. ಆದರೆ, ಸಾಮಗ್ರಿಗಳ ಖರೀದಿಯ ಮೇಲೆ ಕಡಿಮೆ ವೆಚ್ಚ ಮಾಡುತ್ತಿವೆ ಎಂದು ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೂ ಮುನ್ನವೇ ಈ ಹಿಂದಿನ ಸರಕಾರಗಳು ಉದ್ಯೋಗ ಖಾತರಿ ಯೋಜನೆಗಳಿಗೆ ಚಾಲನೆ ನೀಡಿದ್ದವು ಎಂದೂ ಅವರು ಪ್ರತಿಪಾದಿಸಿದರು.
ನರೇಂದ್ರ ಮೋದಿ ನೇತೃತ್ವದ ಸರಕಾರ ನಿರಂಕುಶವಾಗಿ ಯೋಜನೆಗಳ ಹೆಸರನ್ನು ಬದಲಿಸುತ್ತಿದೆ ಎಂಬ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಆರೋಪವನ್ನು ಅಲ್ಲಗಳೆದ ಶಿವರಾಜ್ ಚೌಹಾಣ್, ನೆಹರೂ ಹಾಗೂ ಗಾಂಧಿ ಹೆಸರಿನಲ್ಲಿ ಜಾರಿಗೊಳಿಸಲಾಗಿರುವ ಯೋಜನೆಗಳ ಪಟ್ಟಿಯನ್ನು ಸದನದ ಮುಂದೆ ಮಂಡಿಸಿದರು.





