ಮಧ್ಯಪ್ರದೇಶ | ಉಜ್ಜಯಿನಿಯಲ್ಲಿ ಪ್ರಶ್ನೆ ಪತ್ರಿಕೆಗಳು ನಾಪತ್ತೆ; ಎಂಎ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಿಂದ ವಾಪಸ್

ಸಾಂದರ್ಭಿಕ ಚಿತ್ರ
ಇಂದೋರ್: ಪ್ರಶ್ನೆ ಪತ್ರಿಕೆಗಳು ನಾಪತ್ತೆಯಾದ ಕಾರಣ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಎಂಎ ಯೋಗ ಮತ್ತು ಎಂಎ ತತ್ವಶಾಸ್ತ್ರ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.
ಪ್ರಶ್ನೆ ಪತ್ರಿಕೆಗಳು ಲಭ್ಯವಿಲ್ಲದ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಬೇಕಾಯಿತು ಎಂದು ತಿಳಿದು ಬಂದಿದೆ.
ಸೋಮವಾರ ಮೇ 5 ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಎಂಎ ಎರಡನೇ ಸೆಮಿಸ್ಟರ್ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ವಿಕ್ರಂ ವಿಶ್ವವಿದ್ಯಾಲಯದ ಸುಮನ್ ಹ್ಯುಮಾನಿಟೀಸ್ ಕೇಂದ್ರಕ್ಕೆ ಸುಮಾರು 35 ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯಲು ಆಗಮಿಸಿದರು. ಉತ್ತರ ಪತ್ರಿಕೆಗಳನ್ನು ವಿತರಿಸಿದ ಬಳಿಕ ಆಯಾ ವಿಷಯಗಳ ಪ್ರಶ್ನೆ ಪತ್ರಿಕೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಮಾಹಿತಿ ಬಯಲಾಗುತ್ತಿದ್ದಂತೆ ಪರೀಕ್ಷಾ ನಿಯಂತ್ರಕರು ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಮರಳಿ ಪಡೆದು, ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಅವರಿಗೆ ತಿಳಿಸಿದರು ಎಂದು ತಿಳಿದು ಬಂದಿದೆ.
ವಿಕ್ರಂ ವಿಶ್ವವಿದ್ಯಾಲಯದ ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮಗಳು ಪತ್ತೆಯಾಗಿದ್ದು, ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಉಪಕುಲಪತಿ ಪ್ರೊಫೆಸರ್ ಅರ್ಪಣ್ ಭಾರದ್ವಾಜ್ ಹೇಳಿದ್ದಾರೆ.
ಪರೀಕ್ಷೆಗೆ 15 ನಿಮಿಷಗಳ ಮೊದಲು ಲಕೋಟೆಯನ್ನು ತೆರೆದಾಗ ಪ್ರಶ್ನೆ ಪತ್ರಿಕೆಗಳು ತಪ್ಪಾಗಿರುವುದು ಬೆಳಕಿಗೆ ಬಂದಿದ್ದು, ಅಂತಹ ಸಂದರ್ಭಗಳಲ್ಲಿ ಪರೀಕ್ಷೆಯನ್ನು ನಡೆಸುವುದು ಅಸಾಧ್ಯ ಎಂದು ಪರೀಕ್ಷಾ ಸಂಯೋಜಕ ನಳಿನ್ ಸಿಂಗ್ ಪನ್ವಾರ್ ವಿವರಿಸಿದರು.
ಈ ರೀತಿಯ ಘಟನೆ ನಡೆಯುವುದು ಇದೇ ಮೊದಲಲ್ಲ.
ಮೇ 3 ರಂದು ಇದೇ ರೀತಿಯ ಘಟನೆ ನಡೆದಿದೆ. ಪ್ರಶ್ನೆ ಪತ್ರಿಕೆ ಇಂಗ್ಲಿಷ್ನಲ್ಲಿ ಮಾತ್ರ ಲಭ್ಯವಿದ್ದ ಕಾರಣ ಎಂಎ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯವನ್ನು ನೀಡಲಾಗಿತ್ತು. ಈ ರೀತಿಯ ಬೇಜವಾಬ್ದಾರಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಅಸಮಾಧಾನವನ್ನು ಹುಟ್ಟುಹಾಕಿವೆ.







