ಚಿಪ್ಸ್ ಕದ್ದ ಆರೋಪ ಹೊರಿಸಿ ಭಸ್ಕಿ ಹೊಡೆಸಿದ ಅಂಗಡಿ ಮಾಲಕ: ಮನನೊಂದು 12 ವರ್ಷದ ಬಾಲಕ ಆತ್ಮಹತ್ಯೆ
"ಅಮ್ಮ, ನಾನು ಕಳ್ಳನಲ್ಲ" ಎಂದು ಡೆತ್ ನೋಟ್ ಬರೆದಿಟ್ಟ ಬಾಲಕ

ಕೋಲ್ಕತ್ತಾ: ತನ್ನ ಮೇಲೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದ್ದ ಆರೋಪ ಹೊರಿಸಿ, ತನ್ನಿಂದ ಭಸ್ಕಿ ಹೊಡೆಸಿದ ಅಂಗಡಿ ಮಾಲಕನ ಕೃತ್ಯದಿಂದ ಮನನೊಂದ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಪನ್ಸ್ಕುರದಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ಸಂಜೆ ಗೋಸಾಯಿಬೇರ್ ಬಝಾರ್‌ನಲ್ಲಿರುವ ಅಂಗಡಿಯೊಂದರಲ್ಲಿ ಅಂಗಡಿಯ ಮಾಲಕ ಸುಭಾಂಕರ್ ದೀಕ್ಷಿತ್ ಇಲ್ಲದಿದ್ದ ವೇಳೆ, ಚಿಪ್ಸ್ ಪೊಟ್ಟಣವೊಂದನ್ನು ಕದ್ದ ಆರೋಪಕ್ಕೆ ಏಳನೆ ತರಗತಿಯ ವಿದ್ಯಾರ್ಥಿ ಕೃಶೇಂದು ದಾಸ್ ಗುರಿಯಾಗಿದ್ದ ಎನ್ನಲಾಗಿದೆ. ಬಾಲಕನು ಪದೇ ಪದೇ "ಅಂಕಲ್ ನಾನು ಚಿಪ್ಸ್ ಖರೀದಿಸುತ್ತಿದ್ದೇನೆ" ಎಂದು ಹೇಳಿದರೂ, ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಆತ ಚಿಪ್ಸ್ ಪೊಟ್ಟಣದೊಂದಿಗೆ ತೆರಳಿದ್ದ ಎಂದು ಹೇಳಲಾಗಿದೆ.
ಇದರ ಬೆನ್ನಿಗೇ ಅಂಗಡಿಗೆ ಮರಳಿರುವ ಮಾಲಕ, ಕೃಶೇಂದುವನ್ನು ಅಟ್ಟಿಸಿಕೊಂಡು ಹೋಗಿ, ಆತನ ಕೆನ್ನೆಗೆ ಹೊಡೆದು, ಸಾರ್ವಜನಿಕವಾಗಿ ಆತನಿಂದ ಭಸ್ಕಿ ಹೊಡೆಸಿದ್ದರು ಎಂದು ಮೃತ ಬಾಲಕನ ಕುಟುಂಬದ ಸದಸ್ಯರು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮೃತ ಬಾಲಕನ ತಾಯಿಯನ್ನು ಕರೆಸಿದ್ದ ಅಂಗಡಿಯ ಮಾಲಕ, ಆತನ ವಿರುದ್ಧ ಆಕೆಗೆ ದೂರು ನೀಡಿದ್ದರು. ಇದರಿಂದ ಕುಪಿತಗೊಂಡ ಆತನ ತಾಯಿ, ಆತನಿಗೆ ಬೈದು, ಕೆನ್ನೆಗೆ ಹೊಡೆದಿದ್ದರು ಎಂದು ಹೇಳಲಾಗಿದೆ.
ನಾನು ಅಂಗಡಿ ಬಳಿಯಿದ್ದ ಬುಟ್ಟಿಯಿಂದ ಒಂದು ಚಿಪ್ಸ್ ಪೊಟ್ಟಣವನ್ನು ತೆಗೆದುಕೊಂಡು, ಅದಕ್ಕೆ ಹಣ ಪಾವತಿಸುವ ಉದ್ದೇಶ ಹೊಂದಿದ್ದೆ. ನಾನು ಅದನ್ನು ತೆಗೆದುಕೊಂಡಿದ್ದಕ್ಕೆ ಕ್ಷಮಾಪಣೆಯನ್ನೂ ಕೋರಿ, ಅದರ ಬೆಲೆಯನ್ನು ಪಾವತಿಸುವುದಾಗಿಯೂ ಮನವಿ ಮಾಡಿದೆ. ಆದರೆ, ಅಂಗಡಿ ಮಾಲಕನು ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಆರೋಪಿಸಿದ ಎಂದು ಮೃತ ಬಾಲಕನು ತನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎಂದು ವರದಿಯಾಗಿದೆ.
ತನ್ನ ತಾಯಿಯೊಂದಿಗೆ ಮನೆಗೆ ಮರಳಿದ ನಂತರ, ರೂಮಿನೊಳಗೆ ಹೋಗಿ ಬಾಗಿಲು ಬಾಲಕ ಹಾಕಿಕೊಂಡಿದ್ದಾನೆ. ಎಷ್ಟು ಕರೆದರೂ ರೂಮಿನಿಂದ ಹೊರ ಬರಲು ನಿರಾಕರಿಸಿದ್ದಾನೆ. ಕೆಲ ಹೊತ್ತಿನ ನಂತರ, ಆತನ ತಾಯಿ ಹಾಗೂ ನೆರೆಹೊರೆಯವರು ಸೇರಿಕೊಂಡು ರೂಮಿನ ಬಾಗಿಲನ್ನು ಒಡೆದಾಗ, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







