ಹೇಮಾ ಮಾಲಿನಿ ನೃತ್ಯ ಮಾಡುವಂತೆ ಮಾಡಿದೆ: ವಿವಾದ ಸೃಷ್ಟಿಸಿದ ಮಧ್ಯಪ್ರದೇಶ ಸಚಿವರ ಹೇಳಿಕೆ

Photo: indiatoday.in
ದಾತಿಯಾ (ಮಧ್ಯಪ್ರದೇಶ): ದಾತಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಶಾಸಕ ಹಾಗೂ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮಹಿಳಾ ವಿರೋಧಿ ಹೇಳಿಕೆ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
“ನಾನು ದಾತಿಯಾದಲ್ಲಿ ಯಾವ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆಂದರೆ, ಇಲ್ಲಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಆಯೋಜನೆಗೊಳ್ಳುತ್ತಿಲ್ಲ. ಬದಲಿಗೆ, ಹೇಮಾ ಮಾಲಿನಿ ಕೂಡಾ ನೃತ್ಯ ಮಾಡುವಂತೆ ಮಾಡಲಾಗಿದೆ” ಎಂದು ಮಿಶ್ರಾ ಸಾರ್ವಜನಿಕರನ್ನುದ್ದೇಶಿಸಿ ಹೇಳಿದ್ದಾರೆ.
ಮಿಶ್ರಾರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜನತಾದಳ (ಸಂಯುಕ್ತ) ಪಕ್ಷವು, “ವ್ಯಕ್ತಿತ್ವ ಹಾಗೂ ನಿಲುವನ್ನು ಟೀಕಿಸುವ ನಾಚಿಕೆಗೇಡು ಬಿಜೆಪಿ ಸದಸ್ಯರ ನೈಜತೆಯನ್ನು ನೋಡಿ. ತಮ್ಮದೇ ಪಕ್ಷದ ಸಂಸದೆ ಹೇಮಾ ಮಾಲಿನಿ ವಿರುದ್ಧ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾನ ಹಾನಿ ಹೇಳಿಕೆ ನೀಡಿದ್ದಾರೆ” ಎಂದು ಟೀಕಿಸಿದೆ.
ಮಧ್ಯಪ್ರದೇಶದ ದಾತಿಯಾ ವಿಧಾನಸಭಾ ಕ್ಷೇತ್ರದಿಂದ ನರೋತ್ತಮ್ ಮಿಶ್ರಾ ನಾಲ್ಕನೆಯ ಬಾರಿ ಸ್ಪರ್ಧಿಸುತ್ತಿದ್ದಾರೆ.







