ಮಧ್ಯಪ್ರದೇಶ | ಭೋಪಾಲದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷಾಟನೆಗೆ ನಿಷೇಧ

ಸಾಂದರ್ಭಿಕ ಚಿತ್ರ | PC ; NDTV
ಭೋಪಾಲ: ಮಧ್ಯಪ್ರದೇಶದ ಭೋಪಾಲದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆ.
ಭಿಕ್ಷೆ ಬೇಡುವುದು ಹಾಗೂ ನೀಡುವುದನ್ನು ನಿಷೇಧಿಸಿ ಭೋಪಾಲದ ಜಿಲ್ಲಾಧಿಕಾರಿ ಕುಶಲೇಂದ್ರ ವಿಕ್ರಮ್ ಸಿಂಗ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
‘‘ಒಬ್ಬಂಟಿಯಾಗಿ ಅಥವಾ ತನ್ನ ಕುಟುಂಬದೊಂದಿಗೆ ಭಿಕ್ಷಾಟನೆಯಲ್ಲಿ ತೊಡಗುವ ವ್ಯಕ್ತಿಯು, ಈ ಪದ್ಧತಿಯನ್ನು ತಡೆಯುವ ಗುರಿಯನ್ನು ಹೊಂದಿರುವ ಸರಕಾರದ ನಿರ್ದೇಶನಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾನೆ’’ ಎಂದು ಆದೇಶದಲ್ಲಿ ಹೇಳಲಾಗಿದೆ.
ರಸ್ತೆಯಲ್ಲಿ ಭಿಕ್ಷುಕರು ಅಡಚಣೆ ಉಂಟು ಮಾಡುವುದರಿಂದ ಟ್ರಾಫಿಕ್ ಸಿಗ್ನಲ್ಗಳಲ್ಲಿ ಅಪಘಾತ ಸಂಭವಿಸುವ ಅಪಾಯ ಹೆಚ್ಚುತ್ತಿದೆ ಎಂದು ಭೋಪಾಲದ ಆಡಳಿತ ಪ್ರತಿಪಾದಿಸಿದೆ.
ಹಲವು ಭಿಕ್ಷುಕರು ಇತರ ನಗರಗಳು ಹಾಗೂ ರಾಜ್ಯಗಳಿಂದ ಬಂದಿರುತ್ತಾರೆ. ಅವರಲ್ಲಿ ಕೆಲವರು ಕ್ರಿಮಿನಲ್ ದಾಖಲೆ ಹೊಂದಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣನೀಯ ಸಂಖ್ಯೆಯ ಭಿಕ್ಷುಕರು ಮಾದಕ ದ್ರವ್ಯ ಸೇವನೆ ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ವರದಿಯಾಗಿದೆ. ಸಂಘಟಿತ ಭಿಕ್ಷಾಟನಾ ಜಾಲವು ಆಗಾಗ ಕ್ರಿಮಿನಲ್ ಕಾರ್ಯಾಚರಣೆಯ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಆದೇಶ ಹೇಳಿದೆ.
ನಿರ್ದೇಶನಗಳನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ 2,500 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಆದೇಶ ಹೇಳಿದೆ.