ಮಧ್ಯಪ್ರದೇಶ: ನ್ಯಾಯಾಲಯದಲ್ಲಿ ಮದುವೆಯ ನೋಂದಾವಣೆಗೆ ಪ್ರಯತ್ನಿಸುತ್ತಿದ್ದ ಅಂತರ್ಧರ್ಮೀಯ ಜೋಡಿಯ ಮೇಲೆ ಹಲ್ಲೆ

PC :indianexpress.com
ಭೋಪಾಲ: ಮಧ್ಯಪ್ರದೇಶದ ರೇವಾ ಜಿಲ್ಲೆಯ ನ್ಯಾಯಾಲಯವೊಂದರಲ್ಲಿ ಅಂತರ್ಧರ್ಮೀಯ ಜೋಡಿಯ ಮೇಲೆ ಹಲ್ಲೆ ನಡೆದಿದೆ.
ಮುಸ್ಲಿಂ ವ್ಯಕ್ತಿ ಮತ್ತು ಹಿಂದು ಮಹಿಳೆ ತಮ್ಮ ಮದುವೆಯನ್ನು ನೋಂದಾಯಿಸಿಕೊಳ್ಳಲು ನ್ಯಾಯಾಲಯಕ್ಕೆ ತೆರಳಿದ್ದು, ಬುರ್ಖಾ ಧರಿಸಿದ್ದ ಮಹಿಳೆ ತನ್ನ ಹೆಸರನ್ನು ಬಹಿರಂಗಗೊಳಿಸಿದಾಗ ಈ ಘಟನೆ ನಡೆದಿದೆ.
‘ಲವ್ ಜಿಹಾದ್’ ಪ್ರಕರಣವನ್ನು ಶಂಕಿಸಿದ್ದ ಕೆಲವು ವಕೀಲರು ವ್ಯಕ್ತಿಯ ಆಧಾರ್ ಕಾರ್ಡ್ ಕೇಳಿದ್ದರು. ಆತ ಮುಸ್ಲಿಮ್ ಎನ್ನುವುದು ಗೊತ್ತಾದ ಬಳಿಕ ಆತನನ್ನು ಥಳಿಸಲಾಗಿದೆʼ, ಎಂದು ಪೋಲಿಸರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಮಹಿಳೆ ಮೇಲ್ಜಾತಿಯ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಗುಂಪು ಅವರನ್ನು ಥಳಿಸಿ ತಳ್ಳಾಡಿತ್ತು. ತಾವು ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಿದ್ದು, ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಪೋಲಿಸರು ತಿಳಿಸಿದರು.
ವ್ಯಕ್ತಿಯ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ವಕೀಲರ ಪಾತ್ರದ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೆಚ್ಚುವರಿ ಎಸ್ಪಿ ವಿವೇಕ್ ಕುಮಾರ್ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ವಕೀಲರು ವ್ಯಕ್ತಿಯ ವಿರುದ್ಧ ಪ್ರತಿದೂರನ್ನು ಸಲ್ಲಿಸಿಲ್ಲ ಎಂದರು.
ಹಲ್ಲೆ ಘಟನೆಯಲ್ಲಿ ವಕೀಲರು ಭಾಗಿಯಾಗಿರಲಿಲ್ಲ. ಅವರು ನ್ಯಾಯಾಲಯದ ಆವರಣದಲ್ಲಿ ಪ್ರಸ್ತಾವಿತ ಶಾಸನವೊಂದಕ್ಕೆ ಸಂಬಂಧಿಸಿದ ಪ್ರತ್ಯೇಕ ವಿಷಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ರೇವಾ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಓಝಾ ಸಮಜಾಯಿಷಿ ನೀಡಿದ್ದಾರೆ.







