ಮಧ್ಯಪ್ರದೇಶ | ಮೊಮ್ಮಗನ ಅಂತ್ಯಕ್ರಿಯೆಯ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 65 ವರ್ಷದ ವೃದ್ಧ!

ಸಾಂದರ್ಭಿಕ ಚಿತ್ರ | PC : PTI
ಭೋಪಾಲ್: ಮಧ್ಯಪ್ರದೇಶದ ಸಿಂಧಿ ಜಿಲ್ಲೆಯಲ್ಲಿನ ಕುಟುಂಬವೊಂದರಲ್ಲಿ ನಡೆದಿರುವ ವಿಚಿತ್ರ ಸರಣಿ ಸಾವುಗಳಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಚ್ಚಿ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆತನ ಅಂತ್ಯಕ್ರಿಯೆಯ ಚಿತೆಗೆ ಆತನ ಅಜ್ಜನು ಹಾರಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ 34 ವರ್ಷದ ಅಭಯ್ ರಾಜ್ ಯಾದವ್ ಹಾಗೂ ಆತನ 30 ವರ್ಷದ ಪತ್ನಿ ಸವಿತಾ ಯಾದವ್ ರ ಚಿತಾಭಸ್ಮವನ್ನು ಸಂಗ್ರಹಿಸಲು ಕುಟುಂಬದ ಸದಸ್ಯರು ಸ್ಮಶಾನಕ್ಕೆ ತೆರಳಿದಾಗ, ಅಭಯ್ ರಾಜ್ ಯಾದವ್ ರ 65 ವರ್ಷ ವಯಸ್ಸಿನ ಅಜ್ಜ ರಾಮ್ ಅವತಾರ್ ಯಾದವ್ ಅವರ ಕಳೇಬರ ಪತ್ತೆಯಾಗಿದೆ.
ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿಂದ ಸುಮಾರು 650 ಕಿಮೀ ದೂರವಿರುವ ಸಿಹೊಯ್ಲಾ ಗ್ರಾಮದಲ್ಲಿ ಈ ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಶುಕ್ರವಾರ ಬೆಳಗ್ಗೆ ನಡೆದಿದ್ದ ಕೌಟುಂಬಿಕ ವ್ಯಾಜ್ಯದ ಸಂದರ್ಭದಲ್ಲಿ ಕುಪಿತ ಅಭಯ್ ರಾಜ್ ಯಾದವ್, ತನ್ನ ಪತ್ನಿ ಸವಿತಾ ಯಾದವ್ ರನ್ನು ಕೊಚ್ಚಿ ಹತ್ಯೆಗೈದಿದ್ದ. ನಂತರ ತನ್ನ ಕೃತ್ಯಕ್ಕಾಗಿನ ಪಶ್ಚಾತ್ತಾಪದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಈ ಕುರಿತು ಬಹ್ರಿ ಪೊಲೀಸ್ ಠಾಣೆಗೆ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿತ್ತು.
ನಂತರ, ಶುಕ್ರವಾರ ಸಂಜೆ ಪೊಲೀಸರು ಆ ಮೃತ ದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದ್ದರು ಹಾಗೂ ಸುಮಾರು 7 ಗಂಟೆಯ ವೇಳೆಗೆ ಆ ಮೃತ ದೇಹಗಳ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆ ಮೃತ ದೇಹಗಳಿಗೆ ಅಗ್ನಿ ಸ್ಪರ್ಶ ಮಾಡಿದ ನಂತರ, ರಾಮ್ ಅವತಾರ್ ಯಾದವ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೂ ಮನೆಗೆ ಮರಳಿದ್ದರು ಎಂದು ಬಹ್ರಿ ಪೊಲೀಸ್ ಠಾಣೆಯ ಉಸ್ತುವಾರಿ ರಾಕೇಶ್ ವೈಶ್ಯ ತಿಳಿಸಿದ್ದಾರೆ.
ಕುಟುಂಬದ ಸದಸ್ಯರೆಲ್ಲ ಸಾಮೂಹಿಕ ದುಃಖದಲ್ಲಿ ಮುಳುಗಿದ್ದುದರಿಂದ, ಅವರ್ಯಾರೂ ಅಭಯ್ ರಾಜ್ ಯಾದವ್ ರ ಅಜ್ಜ ಅಲ್ಲಿಂದ ಹೇಗೆ ನಿರ್ಗಮಿಸಿದರು ಎಂದು ಗಮನಿಸಲು ಹೋಗಿಲ್ಲ. ಅವರು ಮೃತಪಟ್ಟ ರಾತ್ರಿಯಂದು ಅವರು ಮನೆಯಿಂದ ನಿರ್ಗಮಿಸಿದ್ದು ಯಾರ ಗಮನಕ್ಕೂ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
“ತಡರಾತ್ರಿ ಎಲ್ಲರೂ ನಿದ್ರಿಸಲು ತೆರಳಿದ್ದಾರೆ. ಬೆಳಗ್ಗೆ ಅವರು ಚಿತಾಭಸ್ಮವನ್ನು ಸಂಗ್ರಹಿಸಲು ತೆರಳಿದಾಗ, ಚಿತೆಯ ಮೇಲೆ ಸುಟ್ಟು ಕರಕಲಾಗಿರುವ ರಾಮ್ ಅವತಾರ್ ಯಾದವ್ ರ ಮೃತ ದೇಹವನ್ನೂ ಕಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷೆಯ ನಂತರ, ಅವರ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ವೃದ್ಧ ರಾಮ್ ಅವತಾರ್ ಸಿಂಗ್ ಚಿತೆಗೆ ಹಾರಿರುವುದನ್ನು ಕುಟುಂಬ ಅಥವಾ ಗ್ರಾಮದ ಯಾರೊಬ್ಬರೂ ಕಂಡಿಲ್ಲ. ಬಹುಶಃ ಅವರೆಲ್ಲ ನಿದ್ರಿಸಿದ ನಂತರ, ರಾಮ್ ಅವತಾರ್ ಯಾದವ್ ಸ್ಮಶಾನಕ್ಕೆ ತೆರಳಿರಬಹುದು. ಈ ಸಂಬಂಧ ಎರಡು ಅಸಹಜ ಸಾವು ಪ್ರಕರಣಗಳು ಹಾಗೂ ಒಂದು ಹತ್ಯೆಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ರಾಕೇಶ್ ವೈಶ್ಯ ಮಾಹಿತಿ ನೀಡಿದ್ದಾರೆ.







