ಮಧ್ಯಪ್ರದೇಶ: ಕೋಮ ಘರ್ಷಣೆ ಪ್ರಕರಣ ; 13 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಭೋಪಾಲ: ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡ ಜಯ ಗಳಿಸಿದ ಹಿನ್ನೆಲೆಯಲ್ಲಿ ಗುಂಪೊಂದು ರವಿವಾರ ರಾತ್ರಿ ಸಂಭ್ರಮದಿಂದ ಮೆರವಣಿಗೆ ನಡೆಸುತ್ತಿದ್ದಾಗ ಭುಗಿಲೆದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಮಹುವಿನಿಂದ 13 ಮಂದಿಯನ್ನು ಬಂಧಿಸಲಾಗಿದೆ ಎಂದು ಇಂದೋರ್ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗ್ರಾಮೀಣ) ತಿಳಿಸಿದ್ದಾರೆ.
ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ಮಹುವಿನಲ್ಲಿರುವ ಜಮಾ ಮಸೀದಿಯ ಮೂಲಕ ಹಾದು ಹೋಗುತ್ತಿರುವ ಸಂದರ್ಭ ಕೇಸರಿ ಬಾವುಟಗಳನ್ನು ಬೀಸಿತು ಹಾಗೂ ಧಾರ್ಮಿಕ ಘೋಷಣೆಗಳನ್ನು ಕೂಗಿತು ಎಂದು ಆರೋಪಿಸಲಾಗಿದೆ. ಅನಂತರ ಉಂಟಾದ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಇನ್ನೊಂದು ಗುಂಪು ಆ ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹಿಂಸಾಚಾರ ಹಾಗೂ ಕಿಚ್ಚಿಡುವಿಕೆಯನ್ನು ನಿಲ್ಲಿಸಲು ಪೊಲೀಸರು ಎರಡೂ ಗುಂಪುಗಳ ಮೇಲೂ ಅಶ್ರವಾಯು ಸೆಲ್ಗಳನ್ನು ಪ್ರಯೋಗಿಸಿದರು ಹಾಗೂ ಲಾಠಿ ಚಾರ್ಜ್ ನಡೆಸಿದರು. ಈ ಬಂಧಿತರಲ್ಲಿ 12 ಮಂದಿ ಮುಸ್ಲಿಮರು ಎಂದು ಪೊಲೀಸರು ಹೇಳಿದ್ದರು.
ಈ ಪ್ರಕರಣದಲ್ಲಿ ಐದು ಪ್ರಥಮ ಮಾಹಿತಿ ವರದಿ (ಎಫ್ಐಆರ್)ಗಳನ್ನು ದಾಖಲಿಸಲಾಗಿದೆ. ಒಂದು ಎಫ್ಐಆರ್ ಅನ್ನು ಗಾಯಗೊಂಡ ನಾಲ್ವರು ದಾಖಲಿಸಿದ್ದಾರೆ. ಇನ್ನೊಂದು ಎಫ್ಐಆರ್ ಅನ್ನು ದುಷ್ಕರ್ಮಿಗಳು ಇರಿಸಿದ ಕಿಚ್ಚಿನಿಂದ ಸುಟ್ಟು ಕರಕಲಾದ ಅಂಗಡಿ ಮಾಲಕ ದಾಖಲಿಸಿದ್ದಾರೆ. ಮೂರನೇ ಎಫ್ಐಆರ್ ಅನ್ನು ಅಗ್ನಿಗಾಹುತಿಯಾದ ಬೈಕ್ಗಳ ಇಬ್ಬರು ಮಾಲಕರು ದಾಖಲಿಸಿದ್ದಾರೆ. ನಾಲ್ಕನೇ ಎಫ್ಐಆರ್ ಅನ್ನು ಮುಸ್ಲಿಂ ಸಮುದಾಯದವರು ದಾಖಲಿಸಿದ್ದಾರೆ. ನಾಲ್ಕನೇ ಎಫ್ಐಆರ್ ಅನ್ನು ಮುಸ್ಲಿಂ ಸಮುದಾಯದವರು ದಾಖಲಿಸಿದ್ದಾರೆ. ಇವುಗಳಲ್ಲಿ ಒಂದು ಎಫ್ಐಆರ್ನಲ್ಲಿ 17 ಮಂದಿಯ ಹೆಸರು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಸೀದಿಯ ಕಟ್ಟಡದೊಳಗೆ ಕೆಲವರು ಪಟಾಕಿಗಳನ್ನು ಎಸೆದರು ಎಂದು ಮಸೀದಿಯ ಮೆಲ್ವಿಚಾರಣೆ ನೋಡಿಕೊಳ್ಳುತ್ತಿರುವ ಧರ್ಮಗುರು ಝಬೀರ್ ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಹೇಳಿಕೆಯನ್ನು ಇನ್ನೂ ದೃಢಪಡಿಸಿಲ್ಲ.
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







