ಮಧ್ಯಪ್ರದೇಶ | ಪಡಿತರ ವಿತರಣೆ ಕುರಿತು ವಿವಾದ : ದಲಿತ ಯುವಕನ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ | PC : freepik.com
ಭೋಪಾಲ್: ಪಡಿತರ ವಿತರಣೆ ಕುರಿತ ವಿವಾದ ಹಿಂಸಾಚಾರಕ್ಕೆ ತಿರುಗಿದ ಬಳಿಕ ದಲಿತ ಯುವಕನೋರ್ವನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ಬಿಲ್ಹಾರಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಆತನ ಸಹೋದರ ಕೂಡ ಗಾಯಗೊಂಡಿದ್ದಾರೆ.
ಸ್ಥಳೀಯ ಪಡಿತರ ಅಂಗಡಿಯಲ್ಲಿ ನಡೆದ ಘರ್ಷಣೆಯ ಸಂದರ್ಭ ದಲಿತ ಯುವಕ ಪಂಕಜ್ ಪ್ರಜಾಪತಿ(19)ಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಈ ಘಟನೆಯಲ್ಲಿ ಅವರ ಸಹೋದರ ಆಶಿಶ್ ಗಾಯಗೊಂಡಿದ್ದಾರೆ.
ಸ್ಥಳೀಯ ನಿವಾಸಿ ಹಾಗೂ ನ್ಯಾಯವಾದಿ ಪ್ರವೀಣ್ ಪಟೇರಿಯಾ ತನ್ನ ಮನೆಯಿಂದ ನಡೆಸುತ್ತಿರುವ ಗ್ರಾಮ ಪಂಚಾಯತ್ನ ಪಡಿತರ ಅಂಗಡಿಯಲ್ಲಿ ರವಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಘರ್ಷಣೆ ನಡೆದಿದೆ.
ಘಟನೆಯ ವೀಡಿಯೊ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಳೆದ ಮೂರು ತಿಂಗಳಿಂದ ಪಡಿತರ ವಿತರಿಸದ ಕುರಿತಂತೆ ಕುಮ್ಹಾರ್ಟೋಲಿ ಗ್ರಾಮದ ಪಂಕಜ್ ಹಾಗೂ ಆಶಿಶ್ ಪ್ರಜಾಪತಿ ಅವರು ಪಟೇರಿಯಾ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿದ್ದಾರೆ.
ಇಬ್ಬರು ಸಹೋದರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಅಂಗಡಿಗೆ ಹಿಂದಿರುಗಿದಾಗ ವಾಗ್ವದ ತೀವ್ರಗೊಂಡಿತು. ಪ್ರವೀಣ್ ಪಟೇರಿಯಾ ಅವರು ನವೀನ್ ಪಟೇರಿಯಾ ಹಾಗೂ ರಾಮ್ಸೇವಕ್ ಅರಜಾರಿಯಾ ಅವರೊಂದಿಗೆ ಸೇರಿ ನಿಂದಿಸಲು ಆರಂಭಿಸಿದರು ಎಂದು ಆರೋಪಿಸಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರವೀಣ್ ಪಟೇರಿಯಾ ಮಾಡಿನ ಮೇಲೆ ಹತ್ತಿ ಗುಂಡು ಹಾರಿಸಿದ. ಗುಂಡು ತಗುಲಿ ಗಂಭೀರ ಗಾಯಗೊಂಡ ಪಂಕಜ್ ಪ್ರಜಾಪತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ದಾರಿ ಮಧ್ಯೆ ಮೃತಪಟ್ಟ. ಗುಂಡು ತಗುಲಿ ಗಾಯಗೊಂಡಿದ್ದ ಆಶಿಶ್ ಪ್ರಜಾಪತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಪೊಲೀಸರ ನಿಷ್ಕ್ರಿಯತೆ ಉಲ್ಲೇಖಿಸಿ ಮೃತಪಟ್ಟ ಪಂಕಜ್ ಪ್ರಜಾಪತಿಯ ಕುಟುಂಬ ನೌಗಾಂವ್ ಆಸ್ಪತ್ರೆಯಲ್ಲಿ ಜಮಾಯಿಸಿ ಆತನ ಮೃತದೇಹದ ಮರಣೋತ್ತರ ಪರೀಕ್ಷೆಗೆ ತಡೆ ಒಡ್ಡಿತು. ಅನಂತರ ತಾಲೂಕು ಕಚೇರಿಯ ಹೊರಗಿನ ರಸ್ತೆ ತಡೆದು ಪ್ರತಿಭಟನೆ ನಡೆಸಿತು. ಪ್ರತಿಭಟನೆ ಸಂದರ್ಭ ಓರ್ವ ಪ್ರತಿಭಟನಕಾರ ಪೆಟ್ರೋಲ್ ಸುರಿದು ಆತ್ಮಾಹುತಿಗೆ ಪ್ರಯತ್ನಿಸಿದ. ಆದರೆ, ಪೊಲೀಸರು ಸಕಾಲದಲ್ಲಿ ಮಧ್ಯೆ ಪ್ರವೇಶಿಸಿ ಆತನನ್ನು ತಡೆದರು.
ಆರಂಭದಲ್ಲಿ ಪೊಲೀಸರು ಓರ್ವ ಆರೋಪಿಯ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದರು. ಇದು ಗ್ರಾಮಸ್ಥರ ಆಕ್ರೋಶ ತೀವ್ರಗೊಳ್ಳಲು ಕಾರಣವಾಯಿತು. ಅನಂತರ ಐದು ಗಂಟೆಗಳ ಪ್ರತಿಭಟನೆಯ ಬಳಿಕ ಪೊಲೀಸರು ಪ್ರವೀಣ್, ನವೀನ್ ಹಾಗೂ ರಾಮ್ಸೇವಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದರು.