ಮಧ್ಯ ಪ್ರದೇಶ | ಮರುಮದುವೆಗೆ ನಿರಾಕರಿಸಿದ ವಿಧವೆ ಸೊಸೆಯನ್ನು ಗುಂಡಿಕ್ಕಿ ಕೊಂದ ಮಾಜಿ ಯೋಧ

ಸಾಂದರ್ಭಿಕ ಚಿತ್ರ | PC : freepik.com
ಮೊರೆನಾ: ಕುಟುಂಬದೊಳಗೆ ಮರುಮದುವೆ ಆಗುವಂತೆ ತನ್ನ ಪ್ರಸ್ತಾವವನ್ನು ನಿರಾಕರಿಸಿದ್ದಕ್ಕಾಗಿ ಮಾಜಿ ಯೋಧನೋರ್ವ ತನ್ನ ವಿಧವೆ ಸೊಸೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಒಂದು ವರ್ಷದ ಹಿಂದಷ್ಟೇ ಪತಿಯನ್ನು ಕಳೆದುಕೊಂಡಿದ್ದ ಸೊಸೆ ಪ್ರಿಯಾಂಕಾ(38)ರನ್ನು ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದ ಬಳಿಕ ಆರೋಪಿ ಜ್ಞಾನಸಿಂಗ್ ಗುರ್ಜರ್(65) ತಲೆಮರೆಸಿಕೊಂಡಿದ್ದಾನೆ ಎಂದು ಸಿವಿಲ್ ಲೈನ್ಸ್ ಪೋಲಿಸ್ ಠಾಣಾಧಿಕಾರಿ ದರ್ಶನಲಾಲ್ ಶುಕ್ಲಾ ಸುದ್ದಿಸಂಸ್ಥೆಗೆ ತಿಳಿಸಿದರು.
ಮೊರೆನಾ ಜಿಲ್ಲಾ ಕೇಂದ್ರದಿಂದ ಎಂಟು ಕಿ.ಮೀ.ದೂರದ ಸಿಕ್ರೋಡಾ ಕಾಲುವೆಯ ಬಳಿ ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು,ಪ್ರಿಯಾಂಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುರ್ಜರ್ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದರು.
ಪತಿಯ ನಿಧನದ ನಂತರ ತನ್ನ ಮೂವರು ಮಕ್ಕಳೊಂದಿಗೆ ತವರುಮನೆಯಲ್ಲಿ ವಾಸವಾಗಿದ್ದ ಪ್ರಿಯಾಂಕಾ ನಾಲ್ಕು ದಿನಗಳ ಹಿಂದಷ್ಟೇ ಗಂಡನ ಮನೆಗೆ ಮರಳಿದ್ದರು ಎಂದು ಪೋಲಿಸರು ತಿಳಿಸಿದರು.
ಪ್ರಿಯಾಂಕಾರ ಸೋದರ ಮುಕೇಶ ಪ್ರಕಾರ,ತನ್ನ ಹಿರಿಯ ಸೋದರನ ಮಗ ಧ್ರುವನನ್ನು ಮದುವೆಯಾಗುವಂತೆ ಗುರ್ಜರ್ ಆಕೆಯ ಮೇಲೆ ಒತ್ತಡವನ್ನು ಹೇರುತ್ತಿದ್ದು, ಈ ಪ್ರಸ್ತಾವವನ್ನು ಆಕೆ ನಿರಾಕರಿಸಿದ್ದರು.
‘ತನಗೆ ಈಗಾಗಲೇ ಮೂವರು ಮಕ್ಕಳಿರುವುದರಿಂದ ನನ್ನ ಸೋದರಿ ಮರುಮದುವೆಗೆ ನಿರಾಕರಿಸಿದ್ದಳು. ಇದು ಅವರ ನಡುವೆ ಪದೇ ಪದೇ ಜಗಳಕ್ಕೆ ಕಾರಣವಾಗಿತ್ತು’ ಎಂದು ಮುಕೇಶ್ ಹೇಳಿದರು.
ಮುಕೇಶ ಆರೋಪದ ಬಗ್ಗೆಯೂ ತಾವು ತನಿಖೆ ನಡೆಸುತ್ತಿರುವುದಾಗಿ ಪೋಲಿಸರು ತಿಳಿಸಿದ್ದಾರೆ.
ಆರೋಪಿ ಗುರ್ಜರ್ ಕಳೆದ 18 ತಿಂಗಳುಗಳಲ್ಲಿ ತನ್ನ ಇಬ್ಬರೂ ಪುತ್ರರನ್ನು ಕಳೆದುಕೊಂಡಿದ್ದ. ಪ್ರಿಯಾಂಕಾರ ಪತಿ ಅಶೋಕ ಕಳೆದ ವರ್ಷದ ಜೂ.9ರಂದು ನಿಧನರಾಗಿದ್ದು, ದಂಪತಿಗೆ ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರಿದ್ದಾರೆ ಎಂದು ಪೋಲಿಸರು ತಿಳಿಸಿದರು.







