ಮಧ್ಯಪ್ರದೇಶದಲ್ಲಿ ಕಾಲ್ಡ್ರಿಫ್ ಸಿರಪ್ ಸೇವಿಸಿ ಮತ್ತೆರೆಡು ಮಕ್ಕಳು ಮೃತ್ಯು ?

ಸಾಂದರ್ಭಿಕ ಚಿತ್ರ | Photo Credit : freepik.com
ಬೈತುಲ್, ಅ. 5: ಮಧ್ಯಪ್ರದೇಶದ ಬೈತುಲ್ ಜಿಲ್ಲೆಯ ಆಮಲಾ ಬ್ಲಾಕ್ನ ಇಬ್ಬರು ಮಕ್ಕಳು ಕಾಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಪರೀಕ್ಷೆಗಳಲ್ಲಿ ಡೈಥಿಲಿನ್ ಗ್ಲೆ‘ಕೋಲ್ ಎಂಬ ವಿಷಕಾರಿ ರಾಸಾಯನಿಕ ಇರುವುದು ಕಂಡು ಬಂದ ನಂತರ ಈ ಸಿರಪ್ ಅನ್ನು ನಿಷೇಧಿಸಲಾಗಿದೆ ಎಂದು ಎಂದು ಆರೋಗ್ಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಈ ಇಬ್ಬರು ಮಕ್ಕಳನ್ನು ಕಲಮೇಶ್ವರ ಗ್ರಾಮದ ಕಮಲೇಶ್ ಅವರ ಪುತ್ರ ಕಬೀರ್ (4) ಹಾಗೂ ಜಮುನ್ ಬಿಚುವಾ ಗ್ರಾಮದ ನಿಖಿಲೇಶ್ ಅವರ ಪುತ್ರ ಗರ್ಮಿತ್ (2.5) ಎಂದು ಆಮಲಾ ಬ್ಲಾಕ್ನ ವೈದ್ಯಕೀಯ ಅಧಿಕಾರಿ ಡಾ. ಅಶೋಕ್ ನರ್ವಾರೆ ಗುರುತಿಸಿದ್ದಾರೆ.
‘‘ಈ ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಜ್ವರದಿಂದ ಹದಗೆಟ್ಟ ಹಿನ್ನೆಲೆಯಲ್ಲಿ ಚಿಂದ್ವಾರ ಜಿಲ್ಲೆಯ ನೆರೆಯ ಪರಸಿಯಾಕ್ಕೆ ಕರೆದುಕೊಂಡು ಹೋಗಲಾಗಿತ್ತು. ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವುದು ಇನ್ನು ಕೂಡ ದೃಢಪಟ್ಟಿಲ್ಲ. ನಾನು ಈ ಬಗ್ಗೆ ವಿಸ್ತೃತ ತನಿಖೆ ನಡೆಸಲು ಹಾಗೂ ವರದಿ ಸಲ್ಲಿಸಲು ನಿರ್ದೇಶಿಸಿದ್ದೇನೆ" ಎಂದು ಡಾ. ನರ್ವಾರೆ ತಿಳಿಸಿದ್ದಾರೆ.
‘‘ಇಬ್ಬರೂ ಮಕ್ಕಳಲ್ಲಿ ಮೂತ್ರಪಿಂಡದ ಸಮಸ್ಯೆ, ಹೊಟ್ಟೆ ಊತದಂತಹ ರೋಗ ಲಕ್ಷಣಗಳು ಕಂಡು ಬಂದಿದ್ದವು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇತುಲ್ನಿಂದ ಬೋಪಾಲ್ಗೆ ಕಳುಹಿಸಿಕೊಡಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಆದರೆ, ಮೂತ್ರ ಪಿಂಡದ ತೀವ್ರ ಸಮಸ್ಯೆ ಕುರಿತ ವರದಿಯನ್ನು ಮುಖ್ಯ ವೈದ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿ (ಸಿಎಂ ಆ್ಯಂಡ್ ಎಚ್ಒ)ಗೆ ಕಳುಹಿಸಿಕೊಡಲಾಗಿದೆ’’ ಡಾ. ನರ್ವಾರೆ ತಿಳಿಸಿದ್ದಾರೆ.
ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ 11 ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾದ ಚಿಂದ್ವಾರದ ಪರಸಿಯಾ ಉಪ ವಿಭಾಗದಿಂದ 150 ಕಿ.ಮೀ. ದೂರದಲ್ಲಿರುವ ಆಮಲಾದಲ್ಲಿ ಈ ಘಟನೆ ನಡೆದಿದೆ.







