ಮಧ್ಯಪ್ರದೇಶ | ಕೆಮ್ಮಿನ ಸಿರಪ್ ಸೇವಿಸಿದ ಮತ್ತಿಬ್ಬರು ಮಕ್ಕಳು ಮೃತ್ಯು

Photo Credit : ANI
ಛಿಂದ್ವಾರ : ಮಧ್ಯಪ್ರದೇಶದ ಛಿಂದ್ವಾರದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಮೂತ್ರಪಿಂಡ ವೈಫಲ್ಯಕ್ಕೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮತ್ತಿಬ್ಬರು ಮಕ್ಕಳು ಮೃತಪಟ್ಟಿದೆ. ಇದರೊಂದಿಗೆ ಛಿಂದ್ವಾರದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಇಂದು ಮತ್ತೊಂದು ಹೆಣ್ಣು ಮಗು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ, 16 ಮಕ್ಕಳು ಮೃತಪಟ್ಟಿದ್ದಾರೆ’’ ಎಂದು ಛಿಂದ್ವಾರದ ಹೆಚ್ಚುವರಿ ಜಿಲ್ಲಾಧಿಕಾರಿ ಧಿರೇಂದ್ರ ಸಿಂಗ್ ತಿಳಿಸಿದ್ದಾರೆ.
ಜಿಲ್ಲೆಯ ಜುನ್ನಾರ್ದೇವ್ನ ನಿವಾಸಿಯಾಗಿರುವ ಜಯುಶಾ ಯದುವಂಶಿ(2) ನಾಗಪುರದ ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾಳೆ.
ನಾಗಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಮಿಯಾ ಬ್ಲಾಕ್ನ ಭರಿಯಾಧನ ಗ್ರಾಮದ ನಿವಾಸಿ ಎರಡೂ ವರ್ಷದ ಧನಿ ದೆಹರಿಯಾ ಸೋಮವಾರ ಮೃತಪಟ್ಟಿದ್ದಾಳೆ.
ವೈದ್ಯರು ಶಿಫಾರಸು ಮಾಡಿದ ಕೆಮ್ಮಿನ ಸಿರಪ್ ಕುಡಿದ ಬಳಿಕ ಆಕೆಯ ಆರೋಗ್ಯ ಹದಗೆಟ್ಟಿತ್ತು ಹಾಗೂ ಕಿಡ್ನಿ ವೈಫಲ್ಯ ಉಂಟಾಗಿತ್ತು ಎಂದು ಆಕೆಯ ಕುಟಂಬದ ಸದಸ್ಯರು ಆರೋಪಿಸಿದ್ದಾರೆ.







