ಅಕ್ರಮ ಗಣಿಗಾರಿಕೆ ಪ್ರತಿಭಟಿಸಿದ ದಲಿತನ ಮೇಲೆ ಮೂತ್ರವಿಸರ್ಜನೆ, ಹಲ್ಲೆ

ಸಾಂದರ್ಭಿಕ ಚಿತ್ರ
ಭೋಪಾಲ್, ಅ.16: ಸರಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಪ್ರತಿಭಟಿಸಿದ ದಲಿತನೊಬ್ಬನನ್ನು ಮಾರಣಾಂತಿಕವಾಗಿ ಥಳಿಸಿ ಆತನ ಮೇಲೆ ಮೂತ್ರವಿಸರ್ಜನೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಕಾತ್ನಿ ಜಿಲ್ಲೆಯಲ್ಲಿ ಶುಕ್ರವಾರ ವರದಿಯಾಗಿದೆ.
ಮಧ್ಯಪ್ರದೇಶದ ಗ್ರಾಮಾಂತರದಲ್ಲಿ ಜಾತಿ ಆಧಾರಿತ ಹಿಂಸಾಚಾರ ಮರುಕಳಿಸುತ್ತಿರುವುದರ ಬಗ್ಗೆ ಈ ಘಟನೆಯು ಜನಾಕ್ರೋಶವನ್ನುಂಟು ಮಾಡಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, 36 ವರ್ಷ ವಯಸ್ಸಿನ ದಲಿತ ರಾಜ್ ಕುಮಾರ್ ಚೌಧುರಿ ಅವರು ತನ್ನ ಜಮೀನಿನ ಸಮೀಪವಿರುವ ರಾಮಗಢ ಬೆಟ್ಟದಲ್ಲಿ ಜಲ್ಲಿಕಲ್ಲಿನ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ಆಕ್ಷೇಪಿಸಿದ್ದನು. ಗ್ರಾಮದ ಸರಪಂಚನಾದ ರಾಮನುಜ ಪಾಂಡೆ ನೇತೃತ್ವದಲ್ಲಿ ಈ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ.
ಅಕ್ರಮ ಗಣಿಗಾರಿಕೆ ಬಗ್ಗೆ ಚೌಧುರಿ ಧ್ವನಿಯೆತ್ತಿ ಮಾತನಾಡತೊಡಗಿದಾಗ, ಆತನ ಮೇಲೆ ಹಲ್ಲೆ ನಡೆಸಲಾಗಿದೆ. ‘ ತನ್ನ ಜಾತಿ ನಿಂದನೆ ಮಾಡಲಾಗಿದೆ. ಕೊಲೆ ಬೆದರಿಕೆ ಹಾಕಲಾಗಿದೆ ಎಂದವರು ಆಪಾದಿಸಿದ್ದಾರೆ.
ಸರಪಂಚ ರಾಮಾನುಜ ಪಾಂಡೆಯ ಪುತ್ರ ಪವನ್ ಪಾಂಡೆ , ಸೋದರಮಗ ಸತೀಶ್ ಪಾಂಡೆ ಮತ್ತಿತರರು,ಮನೆಯತ್ತ ಹೋಗುತ್ತಿದ್ದ ತನ್ನ ಮೇಲೆ ಕಬ್ಬಿಣದ ರಾಡ್ ಗಳು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದರು. ಆಗ ತಾಯಿ ತನ್ನನ್ನು ರಕ್ಷಿಸಲು ಯತ್ನಿಸಿದಾಗ ಆಕೆ ಕೂದಲು ಹಿಡಿದು ಎಳೆದೊಯ್ದರು ಹಾಗೂ ಹಿಗ್ಗಾಮಗ್ಗಾ ಥಳಿಸಿದರು. ರಾಮನುಜ ಪಾಂಡೆಯ ಪುತ್ರ ತನ್ನ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆಂದು’’ ಚೌಧುರಿ ಆಪಾದಿಸಿದ್ದಾರೆ.
ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯಗಳತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದ ಬಳಿಕ ಚೌಧುರಿ ದೂರು ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಎಸ್ಪಿ ಸಂತೋಷ್ ದೆಹಾರಿಯಾ ತಿಳಿಸಿದ್ದಾರೆ.
ಆದರೆ ತನ್ನ ಮೇಲಿನ ಆರೋಪಗಳನ್ನು ಸರಪಂಚ ರಾಮಾನುಜ ಪಾಂಡೆ ತಳ್ಳಿ ಹಾಕಿದ್ದು, ರಾಜಕೀಯ ದುರುದ್ದೇಶದಿಂದ ತನ್ನ ಮೇಲೆ ಆರೋಪ ಹೊರಿಸಲಾಗಿದೆಯೆಂದು ಹೇಳಿದ್ದಾನೆ. ಗ್ರಾಮದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆದಿಲ್ಲ. ಗ್ರಾಮಪಂಚಾಯತ್ ಕಟ್ಟಡದ ನವೀಕರಣ ಕಾಮಗಾರಿಗೆ ಜಲ್ಲಿಕಲ್ಲಿನ ಅಗತ್ಯವಿದೆ. ತನ್ನ ಹೆಸರಿಗೆ ಕಳಂಕ ಹಚ್ಚುವ ಉದ್ದೇಶದಿಂದ ಈ ಆರೋಪ ಹೊರಿಸಲಾಗಿದೆ ಎಂದು ಪಾಂಡೆ ಹೇಳಿದ್ದಾನೆ.







