ಮಧ್ಯಪ್ರದೇಶ | ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆ, ಆರೋಪಿ ಮನೆಗೆ ಬೆಂಕಿಯಿಟ್ಟ ಸಂಬಂಧಿಗಳು

ಸಾಂದರ್ಭಿಕ ಚಿತ್ರ
ಭಿಂಡ್,ಅ.26: ವಿವಾದವೊಂದರ ಬಳಿಕ 35ರ ಹರೆಯದ ದಲಿತ ವ್ಯಕ್ತಿಯೋರ್ವನನ್ನು ನೆರೆಹೊರೆಯವರು ಥಳಿಸಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಸಂಭವಿಸಿದ್ದು, ಗ್ರಾಮದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವುದರಿಂದ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ರವಿವಾರ ತಿಳಿಸಿದರು.
ಮೃತ ವ್ಯಕ್ತಿಯ ಸಂಬಂಧಿಗಳು ಮತ್ತು ಇತರ ಗ್ರಾಮಸ್ಥರು ಆರೋಪಿಗಳ ಪೈಕಿ ಓರ್ವನ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿ.ಮೀ.ದೂರದ ದಬೋಹ್ ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದರು.
ಪೋಲಿಸರ ಪ್ರಕಾರ ಕೊಲೆಯಾಗಿರುವ ರುದ್ರಪ್ರತಾಪ ಸಿಂಗ್ ಜಾಟವ್ ನೆರೆಯ ಕುಟುಂಬವೊಂದರ ಜೊತೆ ವಿವಾದವನ್ನು ಹೊಂದಿದ್ದರು. ಶನಿವಾರ ವಿವಾದ ತಾರಕಕ್ಕೇರಿದ್ದು, ಕೌರವ ಕುಟುಂಬದ ಸದಸ್ಯರು ಜಾಟವ್ ರನ್ನು ದೊಣ್ಣೆಗಳಿಂದ ಥಳಿಸಿದ್ದರು. ಜಾಟವ್ ರಕ್ಷಣೆಗೆ ಪ್ರಯತ್ನಿಸಿದ್ದ ವೃದ್ಧರೋರ್ವರೂ ಗಾಯಗೊಂಡಿದ್ದಾರೆ ಎಂದು ದಬೋಹ್ ಠಾಣಾಧಿಕಾರಿ ರಾಜೇಶ ಶರ್ಮಾ ತಿಳಿಸಿದರು.
ತೀವ್ರವಾಗಿ ಗಾಯಗೊಂಡಿದ್ದ ಜಾಟವ್ ರನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಸಾವನ್ನಪ್ಪಿದ್ದಾರೆ ಎಂದರು.
ಜಾಟವ್ ಸಾವಿನ ಸುದ್ದಿ ಗ್ರಾಮದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದು, ಅವರ ಸಂಬಂಧಿಗಳು ಮತ್ತು ಇತರ ಗ್ರಾಮಸ್ಥರು ಆರೋಪಿಗಳ ಪೈಕಿ ಓರ್ವನ ಮನೆಯನ್ನು ಧ್ವಂಸಗೊಳಿಸಿ, ಹೊರಗೆ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಸಹಿತ ಮನೆಗೆ ಬೆಂಕಿ ಹಚ್ಚಿದ್ದಾರೆ.
ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಭಾರೀ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಪರಿಸ್ಥಿತಿಯು ನಿಯಂತ್ರಣದಲ್ಲಿದೆ.
ಆರೋಪಿಗಳಾದ ರಣವೀರ್ ಕೌರವ, ಆಶು ಕೌರವ, ಪ್ರಹ್ಲಾದ್ ಕೌರವ, ರಾಜೀವ್ ಕೌರವ ಮತ್ತು ಕುಂವರ್ ಸಿಂಗ್ ಕೌರವ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತಲೆಮರೆಸಿಕೊಂಡಿರುವ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.







