ಮಧ್ಯ ಪ್ರದೇಶ | ಅಕಾಲಿಕ ಮಳೆಯಿಂದ ಬೆಳೆ ನಾಶ : ರೈತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ |Photo Credit : PTI
ಭೋಪಾಲ, ಅ. 30: ಮಧ್ಯಪ್ರದೇಶದ ಶಯೋಪುರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆದು ನಿಂತ ಭತ್ತದ ಬೆಳೆ ನಾಶವಾದ ಬಳಿಕ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೊಂಥಾ ಚಂಡಮಾರುತ ಸೇರಿದಂತೆ ಮೂರು ಪ್ರಮುಖ ಚಂಡಮಾರುತಗಳು ಪ್ರಸ್ತುತ ಮಧ್ಯಪ್ರದೇಶದ ಹವಾಮಾನ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದ್ದು, ಶಯೋಪುರ ಹಾಗೂ ಮೊರೇನಾ ಸೇರಿದಂತೆ 11 ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹೊಲಗಳು ಮುಳುಗಿ, ಬೆಳೆ ಕೊಳೆತು, ಬೀಜ, ಗೊಬ್ಬರ ಹಾಗೂ ಕಾರ್ಮಿಕ ಹೂಡಿಕೆ ನಷ್ಟವಾಗಿರುವುದರಿಂದ ಸುಮಾರು 9 ಬಿಗಾ ಭೂಮಿಯಲ್ಲಿ ಭತ್ತದ ಕೃಷಿ ಮಾಡಿದ್ದ ರೈತ ಕೈಲಾಸ್ ಮೀನಾ ಕಂಗಾಲಾಗಿದ್ದರು.
ಕೈಲಾಸ್ ಬುಧವಾರ ಬೆಳಗ್ಗೆ ಹೊಲಕ್ಕೆ ಹೋಗಿದ್ದರು. ಆದರೆ, ಹಿಂದಿರುಗಿ ಬರಲಿಲ್ಲ. ಕೆಲವು ಗಂಟೆಗಳ ಬಳಿಕ ಅವರ ಮೃತದೇಹವನ್ನು ಗ್ರಾಮಸ್ಥರು ಗುರುತಿಸಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ವೈದ್ಯರು ಮೃತಪಟ್ಪಿರುವುದನ್ನು ದೃಢಪಡಿಸಿದರು .
ರೈತ ಕೈಲಾಸ್ ಮೀನಾ ಆತ್ಮಹತ್ಯೆ ಘಟನೆ ಗ್ರಾಮಸ್ಥರನ್ನು ಕೆರಳಿಸಿದೆ. ಅವರು ರಸ್ತೆ ತಡೆ ನಡೆಸಿ 12 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಸಂತ್ರಸ್ತ ರೈತರಿಗೆ ಸರಕಾರದಿಂದ ಪರಿಹಾರ ಹಾಗೂ ತತ್ಕ್ಷಣದ ಸಹಾಯವನ್ನು ನೀಡುವಂತೆ ಆಗ್ರಹಿಸಿದ್ದಾರೆ.







