ಮಧ್ಯಪ್ರದೇಶ: ಸೈಬರ್ ವಂಚನೆ ಹಣದ ಚಲಾವಣೆಗೆ ಜನಧನ್ ಖಾತೆಗಳ ಬಳಕೆ, ಮೂವರ ಬಂಧನ

Photo Credit : Freepik
ಭೋಪಾಲ,ನ.23: ಬ್ಯಾಂಕ್ ಖಾತೆಗಳು ಇಲ್ಲದವರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸಲು ಪಿಎಂ ಜನಧನ್ ಯೋಜನೆಯಡಿ ಸೃಷ್ಟಿಸಲಾಗಿದ್ದ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳನ್ನು ಈಗ ಮಧ್ಯಪ್ರದೇಶದಲ್ಲಿ ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಈವರೆಗೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಇತರ ರಾಜ್ಯಗಳಲ್ಲಿ ಸೈಬರ್ ವಂಚನೆಗಳ ಮೂಲಕ ಲೂಟಿ ಮಾಡಿದ ಹಣದ ಚಲಾವಣೆಗಾಗಿ ವಂಚಕರು ಏಳು ಬ್ಯಾಂಕ್ ಖಾತೆಗಳ ದುರ್ಬಳಕೆ ಮಾಡಿಕೊಂಡಿದ್ದಾರೆ. ಓರ್ವ ಮೃತ ವ್ಯಕ್ತಿಯ ಖಾತೆ ಸೇರಿದಂತೆ ಈ ಪೈಕಿ ಐದು ಖಾತೆಗಳು ಜನಧನ್ ಬ್ಯಾಂಕ್ ಖಾತೆಗಳಾಗಿವೆ.
ಇತ್ತೀಚಿಗೆ ದಿನಗೂಲಿ ಕಾರ್ಮಿಕ ಬಿಸ್ರಾಮ್ ಇವ್ನೆ (40),ಜೂನ್ 2025ರಿಂದ ತನ್ನ ಜನಧನ್ ಖಾತೆಯ ಮೂಲಕ ಸುಮಾರು ಎರಡು ಕೋಟಿ ರೂ.ಗಳ ವಹಿವಾಟುಗಳು ನಡೆದಿವೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತನ್ನ ಕೆವೈಸಿ ವಿವರಗಳ ನವೀಕರಣಕ್ಕಾಗಿ ಬ್ಯಾಂಕಿಗೆ ಭೇಟಿ ನೀಡಿದಾಗ ಈ ವಿಷಯ ಅವರಿಗೆ ಗೊತ್ತಾಗಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬೇತುಲ್ ಜಿಲ್ಲಾ ಎಸ್ಪಿ ವೀರೇಂದ್ರ ಜೈನ್ ಅವರು,ಜಿಲ್ಲಾ ಪೋಲಿಸ್ನ ಸೈಬರ್ ಸೆಲ್ ಈ ಬಗ್ಗೆ ತನಿಖೆ ನಡೆಸಿದ್ದು,ಖಾತೆಯಲ್ಲಿ ಜೂನ್ನಿಂದ ಸುಮಾರು 1.5 ಕೋಟಿ ರೂ.ಗಳ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ನಂತರ ಇಂತಹುದೇ ಇನ್ನೂ ಕೆಲವು ದೂರುಗಳ ಆಧಾರದಲ್ಲಿ ಪೋಲಿಸರು ನಡೆಸಿದ ತನಿಖೆಯಲ್ಲಿ ನಾಲ್ಕು ಜನಧನ್ ಖಾತೆಗಳು ಸೇರಿದಂತೆ ಇನ್ನೂ ಆರು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 9.84 ಕೋಟಿ ರೂ.ಗಳ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ.
ಅಚ್ಚರಿಯ ವಿಷಯವೆಂದರೆ ಶಂಕಾಸ್ಪದ ಹಣಕಾಸು ವಹಿವಾಟುಗಳು ನಡೆದಿರುವ ಒಂದು ಜನಧನ್ ಖಾತೆಯು ರಾಜೇಂದ್ರ ವರ್ಡೆ ಎನ್ನುವವರ ಹೆಸರಿನಲ್ಲಿದ್ದು, ಅವರು ಜೀವಂತವಾಗಿಲ್ಲ. ಕಾಲೇಜು ವಿದ್ಯಾರ್ಥಿನಿ ನರ್ಮದಾ ಇವ್ನೆಯ ವಿದ್ಯಾರ್ಥಿ ವೇತನ ಖಾತೆಯಲ್ಲಿಯೂ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ.
ಈ ಖಾತೆಗಳಲ್ಲಿ 9.84 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಇರಿಸಲಾಗಿತ್ತು ಎನ್ನುವುದು ತನಿಖೆಯಲ್ಲಿ ಕಂಡು ಬಂದಿದೆ. ವಂಚಕರು ಇವುಗಳನ್ನು ಮ್ಯೂಲ್ ಖಾತೆಗಳನ್ನಾಗಿ ಬಳಸಿಕೊಂಡಿದ್ದರು. ಮಹಾರಾಷ್ಟ್ರ,ಕರ್ನಾಟಕ,ದಿಲ್ಲಿ ಮತ್ತು ಹರ್ಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸೈಬರ್ ವಂಚನೆಗಳ ಮೂಲಕ ದೋಚಲಾಗಿದ್ದ ಹಣವನ್ನು ಈ ಖಾತೆಗಳಲ್ಲಿ ಇರಿಸಲಾಗಿತ್ತು ಎಂದು ಎಸ್ಪಿ ಜೈನ್ ತಿಳಿಸಿದರು.







