ಮಧ್ಯಪ್ರದೇಶ | ಅಂಗವಿಕಲ ವ್ಯಕ್ತಿಗೆ ಸಂಬಂಧಿಕರಿಂದ ಥಳಿತ, ಮೂತ್ರ ವಿಸರ್ಜನೆ; ಇಬ್ಬರ ಬಂಧನ

PC : NDTV
ಭೋಪಾಲ, ನ. 23: ಅಂಗವಿಕಲ ವ್ಯಕ್ತಿಯೋರ್ವನಿಗೆ ಆತನ ಸಂಬಂಧಿಕರೇ ಕ್ರೂರವಾಗಿ ಹಲ್ಲೆ ನಡೆಸಿದ ಹಾಗೂ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿದೆ.
ಈ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೆಟ್ರೋಲ್ ಪಂಪ್ ಒಂದರ ಸಮೀಪ ಚಿತ್ರೀಕರಿಸಲಾದ 37 ಸೆಕೆಂಡ್ಗಳ ವೀಡಿಯೊದಲ್ಲಿ ಅಂಗವಿಕಲ ವ್ಯಕ್ತಿಯೋರ್ವರಿಗೆ ಆತನ ಸಂಬಂಧಿಕರು ಥಳಿಸುತ್ತಿರುವುದು ಹಾಗೂ ಆತನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ. ಆದರೂ ಅಲ್ಲಿದ್ದವರು ನೆರವಿಗೆ ಧಾವಿಸದೆ ಘಟನೆಯನ್ನು ವೀಕ್ಷಿಸುತ್ತಿರುವುದು, ವೀಡಿಯೊ ಮಾಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ವೀಡಿಯೊ ವೈರಲ್ ಆದ ದಿನದ ಬಳಿಕ ಘಟನೆಗೆ ಸಂಬಂಧಿಸಿ ಆರೋಪಿಗಳಾದ ರಾಜ್ಕುಮಾರ್ ಲವಾಂಶಿ ಹಾಗೂ ಗೋವಿಂದ್ ಲವಾಂಶಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭತ್ತ ಮಾರಾಟ ಮಾಡಿ ಮದ್ಯ ಸೇವಿಸಿದ ಬಳಿಕ ಸಂತ್ರಸ್ತ ಹಾಗೂ ಆರೋಪಿಗಳು ಮನೆಗೆ ಹಿಂದಿರುಗುತ್ತಿದ್ದಾಗ ಅವರ ನಡುವೆ ಜಗಳ ಆರಂಭವಾಯಿತು. ಅದು ಹಲ್ಲೆಗೆ ಕಾರಣವಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಸಂತ್ರಸ್ತನ ಮೇಲೆ ಹತ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮತ್ತೋರ್ವ ಸಂತ್ರಸ್ತನನ್ನು ಹಿಡಿದು ಎಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಶೀಲಾ ಸುರಾನಾ ಆರೋಪಿಗಳ ಬಂಧನವನ್ನು ದೃಢಪಡಿಸಿದ್ದಾರೆ. ಅಲ್ಲದೆ, ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.







