Madhya Pradesh: ಬಿಜೆಪಿ ನಾಯಕಿಯ ಪುತ್ರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ

ಸಾಂದರ್ಭಿಕ ಚಿತ್ರ
ಭೋಪಾಲ, ಡಿ. 25: ಬಿಜೆಪಿ ನಾಯಕಿ ಹಾಗೂ ಶಿವಪುರಿ ನಗರ ಸಭೆಯ ಅಧ್ಯಕ್ಷೆ ಗಾಯತ್ರಿ ಶರ್ಮಾ ಅವರ ಪುತ್ರ ರಜತ್ ಶರ್ಮಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೋರ್ವರು ನಿದ್ರೆ ಮಾತ್ರೆ ಹಾಗೂ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು ಕೂಡಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆ ಎಪ್ರಿಲ್ 14ರಂದು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಹಿನ್ನೆಲೆಯಲ್ಲಿ ರಜತ್ ಶರ್ಮಾ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಪ್ರಿಲ್ 30ರಂದು FIR ದಾಖಲಾಗಿದೆ. ಸುಮಾರು ಒಂದು ತಿಂಗಳ ಬಳಿಕ ರಜತ್ ಶರ್ಮಾ ಗೆ ಉಚ್ಚ ನ್ಯಾಯಾಲಯ ಜಾಮೀನು ನೀಡಿತ್ತು.
ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ 6 ಪುಟಗಳ ಸುಸೈಡ್ ನೋಟ್ ಬರೆದಿದ್ದಾರೆ. ಅದರಲ್ಲಿ ತಾನು ಕಳೆದ 7 ತಿಂಗಳಿಂದ ಕಿರುಕುಳ ಹಾಗೂ ಬೆದರಿಕೆ ಎದುರಿಸಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸುಸೈಡ್ ನೋಟ್ ನಲ್ಲಿ ಅವರು ನಗರ ಸಭೆಯ ಅಧ್ಯಕ್ಷೆ ಗಾಯತ್ರಿ ಶರ್ಮಾ, ಅವರ ಪತಿ ಸಂಜಯ್ ದುಬೆ ಹಾಗೂ ಅವರ ಪುತ್ರ ರಜತ್ ಶರ್ಮಾ ತನ್ನನ್ನು ಈ ಮಾನಸಿಕ ಒತ್ತಡಕ್ಕೀಡು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.





