Madhya Pradesh | ಉದ್ಯೋಗದ ಆಮಿಷವೊಡ್ಡಿ ವಿವಿ ಕ್ಯಾಂಪಸ್ ನಲ್ಲಿ ಯುವತಿಯ ಅತ್ಯಾಚಾರ

ಸಾಂದರ್ಭಿಕ ಚಿತ್ರ | Photo Credit : freepik.com
ಜಬಲ್ಪುರ,ಡಿ.27: ಇಲ್ಲಿಯ ಸರಕಾರಿ ಜವಾಹರಲಾಲ್ ನೆಹರು ಕೃಷಿ ವಿವಿಯ ಗುಮಾಸ್ತನೋರ್ವ ಉದ್ಯೋಗದ ಆಮಿಷವನ್ನೊಡ್ಡಿ ವಿವಿ ಕ್ಯಾಂಪಸ್ ನಲ್ಲಿ 22ರ ಹರೆಯದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೋಲಿಸರು ಶನಿವಾರ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿವಿಯ ಮೇಲ್ದರ್ಜೆ ಲಿಪಿಕ ಶಂಕರ್ ಸಿಂಗೇರಿಯಾ(58) ಮತ್ತು ಜವಾನ್ ಮುಕೇಶ್ ಸೇನ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಅಧಿಕಾರಿಗಳ ಪ್ರಕಾರ ತಿಲ್ವಾರಾ ನಿವಾಸಿಯಾಗಿರುವ ಸಂತ್ರಸ್ತೆಗೆ 20 ದಿನಗಳ ಹಿಂದೆ ಸಾಮಾಜಿಕ ಜಾಣತಾಣಗಳಲ್ಲಿ ವಿವಿಯಲ್ಲಿ ಖಾಲಿಯಿರುವ ಗುತ್ತಿಗೆ ಹುದ್ದೆಗಳ ಬಗ್ಗೆ ಮಾಹಿತಿ ಲಭಿಸಿತ್ತು. ಸಂಪರ್ಕ ವಿವರಗಳಿಗಾಗಿ ಹುಡುಕುತ್ತಿದ್ದಾಗ ಆಕೆ ಕುಲಪತಿಗಳ ಕಚೇರಿಗೆ ಕರೆ ಮಾಡಿದ್ದಳು. ಕರೆಯನ್ನು ಸ್ವೀಕರಿಸಿದ್ದ ಸಿಂಗೇರಿಯಾ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಿ ದಾಖಲೆಗಳೊಂದಿಗೆ ವಿವಿಗೆ ಭೇಟಿ ನೀಡುವಂತೆ ಸೂಚಿಸಿದ್ದ.
ಮರುದಿನ ವಿವಿಗೆ ತೆರಳಿದ್ದ ಯುವತಿಗೆ ತಾನು ಕುಲಪತಿಗಳೊಂದಿಗೆ ಸಮಾಲೋಚಿಸಿದ ನಂತರ ಉದ್ಯೋಗವನ್ನು ಒದಗಿಸುವುದಾಗಿ ಭರವಸೆ ನೀಡಿದ್ದ ಸಿಂಗೇರಿಯಾ ತನ್ನ ಸಂಪರ್ಕದಲ್ಲಿರುವಂತೆ ತಿಳಿಸಿದ್ದ. ಸಿಂಗೇರಿಯಾ ಹಲವಾರು ಬಾರಿ ನಗರದಲ್ಲಿ ಯುವತಿಯನ್ನು ಭೇಟಿಯಾಗಿದ್ದು, ನೇಮಕಾತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಮತ್ತು ಶೀಘ್ರವೇ ಸಂದರ್ಶನಕ್ಕೆ ಕರೆಯಲಾಗುವುದು ಎಂದು ಪದೇಪದೇ ಭರವಸೆ ನೀಡಿದ್ದ ಎಂದು ಪೋಲಿಸರು ತಿಳಿಸಿದರು.
ಗುರುವಾರ ಸಿಂಗೇರಿಯಾ ಸಂದರ್ಶನದ ನೆಪದಲ್ಲಿ ಸಂತ್ರಸ್ತೆಯನ್ನು ವಿವಿಗೆ ಬರುವಂತೆ ತಿಳಿಸಿದ್ದು, ಕ್ಯಾಂಪಸ್ನಲ್ಲಿರುವ ಸೇನ್ ನಿವಾಸಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದ. ಯುವತಿ ತನ್ನ ನಿವಾಸವನ್ನು ಪ್ರವೇಶಿಸಿದ ಬಳಿಕ ಸೇನ್ ಅಲ್ಲಿಂದ ತೆರಳಿದ್ದು, ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿದ್ದ ಎನ್ನಲಾಗಿದೆ.
ಅಲ್ಲಿಯೇ ಇದ್ದ ಸಿಂಗೇರಿಯಾ ತಾನು ಪ್ರತಿರೋಧಿಸಿದರೂ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ ಎಂದು ಪೋಲಿಸರು ತಿಳಿಸಿದರು.
ಲೈಂಗಿಕ ದೌರ್ಜನ್ಯದ ಬಳಿಕ ಆರೋಪಿಯು ಯುವತಿಯನ್ನು ಕ್ಯಾಂಪಸ್ ನ ಹೊರಗೆ ಇಳಿಸಿ ಮಾನಹಾನಿಯ ಬೆದರಿಕೆ ಹಾಕಿದ್ದ ಮತ್ತು ವೌನವಾಗಿದ್ದರೆ ಉದ್ಯೋಗವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.
ಬಳಿಕ ಯುವತಿ ವಿಷಯವನ್ನು ತನ್ನ ಕುಟುಂಬಕ್ಕೆ ತಿಳಿಸಿ ಪೋಲಿಸ್ ದೂರನ್ನು ದಾಖಲಿಸಿದ್ದಳು. ಪೋಲಿಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅವರ ಮನೆಗಳಿಂದ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.







