ಸನಾತನ ಧರ್ಮದ ಬಗ್ಗೆ ಪ್ರಚಾರ ನಿಲ್ಲಿಸುತ್ತೇನೆ: ಹರ್ಷ ರಿಚಾರಿಯಾ

ಹರ್ಷ ರಿಚಾರಿಯಾ | Photo Credit : X/@SurajKrBauddh
ಜಬಲ್ಪುರ: ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದ ಮಾಡೆಲ್ ಹಾಗೂ ವೃತ್ತಿಪರ ನಿರೂಪಕಿ ಹರ್ಷ ರಿಚಾರಿಯಾ, ಸನಾತನ ಧರ್ಮದ ಬಗ್ಗೆ ಪ್ರಚಾರವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಮಕರ ಸಂಕ್ರಾಂತಿ ಹಿನ್ನೆಲೆ ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ಮಾತನಾಡಿದ ಹರ್ಷ ರಿಚಾರಿಯಾ, ಎಲ್ಲರೂ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಅದರ ಬಗ್ಗೆ ಪ್ರಚಾರ ಮಾಡಲು ಯಾವುದೇ ಯುವಕರು ಮುಂದೆ ಬಂದರೆ ವಿರೋಧ ಎದುರಾಗುತ್ತದೆ ಎಂದು ಹೇಳಿದರು.
ನಿರಂತರ ಟೀಕೆ, ಮಾನಸಿಕ ಒತ್ತಡ ಮತ್ತು ದಾಳಿಗಳು ಧಾರ್ಮಿಕ ಮಾರ್ಗದಿಂದ ದೂರ ಸರಿದು ಹಿಂದಿನ ಜೀವನಕ್ಕೆ ಮರಳುವಂತೆ ಮಾಡಿವೆ ಎಂದು ಹರ್ಷ ಹೇಳಿದರು.
“ನೀವು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಾಗಲೂ, ಕೆಲವು ‘ಧರ್ಮಗುರುಗಳು’ ನಿಮ್ಮನ್ನು ವಿರೋಧಿಸಿದರೆ, ಅದು ತುಂಬಾ ನಿರಾಸೆ ಉಂಟುಮಾಡುತ್ತದೆ. ಧಾರ್ಮಿಕ ಮಾರ್ಗವನ್ನು ತ್ಯಜಿಸುವ ಮೊದಲು ಗಂಗಾ ನದಿಯಲ್ಲಿ ‘ಒಂದು ಅಂತಿಮ ಸ್ನಾನ’ ಮಾಡುವುದಾಗಿ ನಾನು ನಿರ್ಧರಿಸಿದ್ದೇನೆ,” ಎಂದು ಅವರು ಹೇಳಿದರು.
ತನ್ನ ಹಿಂದಿನ ವೃತ್ತಿ ಜೀವನಕ್ಕೆ ಮರಳುವ ಮೊದಲು, ಜನವರಿ 18ರಂದು ಪ್ರಯಾಗರಾಜ್ನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತೇನೆ. ‘ಹರ್ ಹರ್ ಮಹಾದೇವ್’ ಅನ್ನು ಜಪಿಸುತ್ತೇನೆ. ಬಳಿಕ ಧಾರ್ಮಿಕ ಮಾರ್ಗದ ಬಗೆಗಿನ ನನ್ನ ಬದ್ಧತೆಯನ್ನು ಔಪಚಾರಿಕವಾಗಿ ಕೊನೆಗೊಳಿಸುತ್ತೇನೆ ಎಂದು ಹೇಳಿದರು.
ಪ್ರತ್ಯೇಕ ವೀಡಿಯೊದಲ್ಲಿ, ಕಳೆದ ಒಂದು ವರ್ಷದಿಂದ ನಾನು ನಿರಂತರ ವಿರೋಧವನ್ನು ಎದುರಿಸಿದ್ದೇನೆ. ನನ್ನ ವ್ಯಕ್ತಿತ್ವವನ್ನು ಪ್ರಶ್ನಿಸಲಾಯಿತು. ಧರ್ಮದ ಮಾರ್ಗವನ್ನು ಅನುಸರಿಸಿ ನಾನು ಏನೇ ಮಾಡಲು ಪ್ರಯತ್ನಿಸಿದರೂ ಅದನ್ನು ಪ್ರಶ್ನಿಸಲಾಯಿತು ಮತ್ತು ವಿರೋಧಿಸಲಾಯಿತು ಎಂದು ಅವರು ಹೇಳಿದರು.
“ನಾನು ಅಗತ್ಯವಿದ್ದಷ್ಟು ಪರೀಕ್ಷೆಗಳನ್ನು ಎದುರಿಸಿದ್ದೇನೆ, ಮಾಡಬೇಕಾದ ಎಲ್ಲವನ್ನೂ ಮಾಡಿದ್ದೇನೆ. ಆದ್ದರಿಂದ ನಿಮ್ಮ ಧರ್ಮವನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಅಗ್ನಿ ಪರೀಕ್ಷೆಗೆ ಒಳಗಾಗಲು ನಾನು ತಾಯಿ ಸೀತೆ ಅಲ್ಲ,” ಎಂದು ಅವರು ಹೇಳಿದರು.
ಇನ್ಸ್ಟಾಗ್ರಾಂನಲ್ಲಿ ಸುಮಾರು 17 ಲಕ್ಷ ಫಾಲೋವರ್ ಗಳನ್ನು ಹೊಂದಿರುವ ಹರ್ಷಾ, ಕಳೆದ ವರ್ಷ ಪ್ರಯಾಗರಾಜ್ ನ ಮಹಾಕುಂಭ ಮೇಳದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಅವರು ಸನಾತನ ಧರ್ಮದ ಪರ ಪ್ರಚಾರ ನಿಲ್ಲಿಸುವುದಾಗಿ ಹೇಳಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರೊಫೈಲ್ ಅನ್ನು ಇನ್ನೂ ಬದಲಾಯಿಸಿಲ್ಲ. ಅದರಲ್ಲಿ ಇನ್ನೂ ‘ಸನಾತನಿ ಶೆರ್ನಿ’ ಎಂದು ಬರೆಯಲಾಗಿದೆ.







