ಮಧ್ಯಪ್ರದೇಶ | ಅತ್ಯಾಚಾರವನ್ನು ಸೌಂದರ್ಯದೊಂದಿಗೆ ಹೋಲಿಸಿ, ತೀರ್ಥಯಾತ್ರೆಯ ಫಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ!

Photo Credit: X/@BaraiyaINC
ಭೋಪಾಲ್: ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಗರಕ್ಕೆ ಆಗಮಿಸಿರುವ ಸಮಯದಲ್ಲೇ, ಅವರಿಗೆ ಹಾಗೂ ಪಕ್ಷಕ್ಕೆ ಮುಜುಗರ ಉಂಟುಮಾಡುವಂತಹ ಹೇಳಿಕೆಯನ್ನು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಭಂದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯಾ ನೀಡಿದ್ದಾರೆ. ಅತ್ಯಾಚಾರವನ್ನು ಸೌಂದರ್ಯದೊಂದಿಗೆ ಹೋಲಿಸಿ, ಅದನ್ನು ತೀರ್ಥಯಾತ್ರೆಯ ಫಲ ಎಂದು ಅವರು ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾಸಕ ಫೂಲ್ ಸಿಂಗ್ ಬರೈಯಾ, “ಭಾರತದಲ್ಲಿ ಅತ್ಯಧಿಕ ಅತ್ಯಾಚಾರಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮಹಿಳೆಯರ ಮೇಲೆ ನಡೆಯುತ್ತವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಇದರರ್ಥವೇನೆಂದರೆ, ಓರ್ವ ಪುರುಷ ರಸ್ತೆಯ ಮೇಲೆ ನಡೆದು ಹೋಗುವಾಗ, ಆತನಿಗೆ ಸುಂದರ ಯುವತಿ ಕಂಡರೆ, ಆಕೆ ಅತ್ಯಂತ ಸುಂದರಿಯಾಗಿದ್ದರೆ, ಆತನ ಮನಸ್ಸು ವಿಚಲಿತವಾಗಬಹುದು. ಆಗ ಅತ್ಯಾಚಾರ ನಡೆಯಬಹುದು” ಎಂದು ಬರೈಯಾ ಹೇಳಿದ್ದಾರೆ. ಆದಿವಾಸಿಗಳು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳಲ್ಲಿ ಅತ್ಯಂತ ಸುಂದರಿ ಮಹಿಳೆಯರು ಇದ್ದಾರೆ ಎಂದು ವಿವರಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶ ಬಹುಜನ ಸಮಾಜ ಪಕ್ಷದ ಮಾಜಿ ಮುಖ್ಯಸ್ಥರೂ ಆಗಿರುವ ಬರೈಯಾ, ಈ ಸಮುದಾಯಗಳ ಮಹಿಳೆಯರ ಮೇಲೆ ಅತ್ಯಾಚಾರಗಳು ಏಕೆ ನಡೆಯುತ್ತವೆ ಎಂದರೆ, ಅವರ ಧಾರ್ಮಿಕ ಗ್ರಂಥಗಳಲ್ಲಿ ಅಂತಹ ಸೂಚನೆಗಳನ್ನು ನೀಡಲಾಗಿದೆ ಎಂದೂ ಹೇಳಿದ್ದಾರೆ.
ಆದರೆ, ಅಂತಹ ಯಾವುದಾದರೂ ಧಾರ್ಮಿಕ ಗ್ರಂಥವನ್ನು ಉಲ್ಲೇಖಿಸುವಂತೆ ಪ್ರಶ್ನಿಸಿದಾಗ, ಸ್ಪಷ್ಟ ಉತ್ತರ ನೀಡುವಲ್ಲಿ ಬರೈಯಾ ವಿಫಲರಾಗಿದ್ದಾರೆ.
ಈ ಹೇಳಿಕೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ರಾಜ್ಯದ ಇಂದೋರ್ಗೆ ರಾಹುಲ್ ಗಾಂಧಿ ಭೇಟಿ ನೀಡಿರುವಾಗ ಬರೈಯಾ ಸಾಮಾಜಿಕ ದ್ವೇಷ ಹರಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ಸಮಾಜದ ಇತರ ವರ್ಗಗಳ ಬಗ್ಗೆ ರಾಹುಲ್ ಗಾಂಧಿಗೆ ಗೌರವವಿದೆ ಎಂಬುದನ್ನು ತೋರಿಸಲು, ರಾಹುಲ್ ಗಾಂಧಿ ಅವರು ಬರೈಯಾರನ್ನು ಪಕ್ಷದಿಂದ ಉಚ್ಚಾಟಿಸಬೇಕು. ನಾನು ಈ ಹೇಳಿಕೆಯನ್ನು ಖಂಡಿಸುತ್ತೇನೆ. ಬರೈಯಾ ಓರ್ವ ಶಾಸಕರಾಗಿದ್ದು, ಇಂತಹ ಹೇಳಿಕೆಗಳನ್ನು ತಡೆಯುವ ಜವಾಬ್ದಾರಿ ಅವರ ಮೇಲಿದೆ” ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಬಿಜೆಪಿಯ ಮಾಧ್ಯಮ ಉಸ್ತುವಾರಿ ಆಶಿಶ್ ಉಷಾ ಅಗರ್ವಾಲ್ ಕೂಡ ಈ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಬರೈಯಾರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.
“ಅವರು ಮಹಿಳೆಯನ್ನು ಸೌಂದರ್ಯದ ಆಧಾರದಲ್ಲಿ ತೂಗಿ ನೋಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರ ಮೇಲಿನ ಅತ್ಯಾಚಾರದಂತಹ ಹೀನ ಅಪರಾಧವನ್ನು ತೀರ್ಥಯಾತ್ರೆಯ ಫಲ ಎಂದು ಬಣ್ಣಿಸುವುದು ಕ್ರಿಮಿನಲ್ ಮನಸ್ಥಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಸಮಾನವಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ತಕ್ಷಣವೇ ಕ್ಷಮಾಪಣೆ ಕೋರಿ ಬರೈಯಾರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲವಾದಲ್ಲಿ, ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಮತ್ತು ದಲಿತ ವಿರೋಧಿ ಮನಸ್ಥಿತಿಯೊಂದಿಗೆ ನಿಂತಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.







