Madhya Pradesh| ಇಂದೋರ್ನಲ್ಲಿ ಕಲುಷಿತ ನೀರು ಕುಡಿದು ಮತ್ತೆ 22 ಮಂದಿ ಅಸ್ವಸ್ಥ

Photo: PTI
ಇಂದೋರ್ : ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹಿರಿಮೆಗೆ ಪಾತ್ರವಾಗಿರುವ ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 23 ಮಂದಿ ಮೃತಪಟ್ಟು, ಹಲವರು ಆಸ್ಪತ್ರೆಗೆ ದಾಖಲಾದ ಘಟನೆಯ ಬೆನ್ನಿಗೇ, ಮತ್ತೊಂದು ಕಲುಷಿತ ನೀರು ಸೇವನೆ ಪ್ರಕರಣದಲ್ಲಿ 22 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ಇತ್ತೀಚಿನ ಪ್ರಕರಣಗಳು ಮುಖ್ಯವಾಗಿ ಮಹೋವ್ ಪ್ರದೇಶದಿಂದ ವರದಿಯಾಗಿದ್ದು, ಕಲುಷಿತ ನೀರು ಸೇವಿಸಿ 22 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ, 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ಕಪಕ್ಕದ ಪ್ರದೇಶಗಳಿಂದಲೂ ಇಂತಹುದೇ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಅಸ್ವಸ್ಥಗೊಂಡವರ ಸಂಖ್ಯೆ 25 ಅನ್ನು ಮೀರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೊಂದರೆಗೊಳಗಾದ ಪ್ರದೇಶಗಳಿಂದ ಈ ಸಂಬಂಧ ದೂರುಗಳು ಕೇಳಿ ಬರುತ್ತಿದ್ದಂತೆಯೇ, ಜಿಲ್ಲಾಡಳಿತವು ಗುರುವಾರ ಮಧ್ಯರಾತ್ರಿ ಕಾರ್ಯಪ್ರವೃತ್ತವಾಗಿದೆ. ರೋಗಿಗಳನ್ನು ಭೇಟಿಯಾಗಲು ಹಾಗೂ ಪರಿಹಾರ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಲು ಜಿಲ್ಲಾಧಿಕಾರಿ ಶಿವಂ ವರ್ಮ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತೊಂದರೆಗೀಡಾಗಿರುವ ಸ್ಥಳಗಳಲ್ಲಿ ಆರೋಗ್ಯ ತಂಡಗಳನ್ನೂ ನಿಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆಯಿಂದ ತೊಂದರೆಗೊಳಗಾಗಿರುವ ಸ್ಥಳದಲ್ಲಿ ಬೀಡು ಬಿಟ್ಟಿರುವ ಆರೋಗ್ಯ ಇಲಾಖೆಯ ತಂಡ, ತಕ್ಷಣದ ವೈದ್ಯಕೀಯ ನೆರವನ್ನು ಒದಗಿಸುತ್ತಿದೆ. ಕಲುಷಿತ ನೀರು ಸೇವನೆಯಿಂದ ತೊಂದರೆಗೀಡಾಗಿರುವ ಅಕ್ಕಪಕ್ಕದ ಸ್ಥಳಗಳಲ್ಲಿನ ಪರಿಸ್ಥಿತಿಯ ಮೇಲೆ ಈ ತಂಡ ನಿಗಾ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







