Madhya Pradesh | ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಮೃತ್ಯು ಪ್ರಕರಣ; ಸ್ವಚ್ಛ ಜಲ ಅಭಿಯಾನಕ್ಕೆ ಚಾಲನೆ

pc : PTI
ಭೋಪಾಲ, ಜ.11: ಇಂದೋರ್ ನಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ರಾಜ್ಯಾದ್ಯಂತ ಸ್ವಚ್ಛ ಜಲ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಈ ಉಪಕ್ರಮವು ಪ್ರಮುಖವಾಗಿ ನೀರು ಮತ್ತು ಒಳಚರಂಡಿ ಕೊಳವೆಗಳ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮ್ಯಾಪಿಂಗ್, ಈ ಕೊಳವೆ ಮಾರ್ಗಗಳು ಪರಸ್ಪರ ಸೇರುವ ಸ್ಥಳಗಳ ಗುರುತಿಸುವಿಕೆ ಮತ್ತು ರೋಬೊಟ್ ಗಳನ್ನು ಬಳಸಿಕೊಂಡು ಸೋರಿಕೆ ಪರಿಶೀಲನೆಗಳನ್ನು ಒಳಗೊಂಡಿರಲಿದೆ.
ಅಭಿಯಾನದ ಮೊದಲ ಹಂತ ಜ.10ರಿಂದ ಫೆ.28ರವರೆಗೆ ಮತ್ತು ಎರಡನೇ ಹಂತ ಮಾ.1ರಿಂದ ಮಾ.31ರವರೆಗೆ ನಡೆಯಲಿವೆ. ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲುಗಳನ್ನೂ ಸ್ವೀಕರಿಸಲಾಗುವುದು. ಮುಖ್ಯಮಂತ್ರಿಗಳ ಸಹಾಯವಾಣಿ (181) ಮೂಲಕ ಸಾರ್ವಜನಿಕರು ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಗಳು, ಪ್ರತಿಯೊಂದು ಮನೆಗೆ ಶುದ್ಧ ನೀರನ್ನು ಪೂರೈಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇಂದೋರ್ ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ ಡಿ.21ರಿಂದ 21 ಜನರು ಮೃತಪಟ್ಟಿದ್ದರು.
ಗಮನಾರ್ಹವಾಗಿ, ಭಗೀರಥಪುರದಲ್ಲಿ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜ.6ರಂದು ಕೈಗೆತ್ತಿಕೊಂಡಿದ್ದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ ಪೀಠವು ರಾಜ್ಯ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ಭಗೀರಥಪುರ ಘಟನೆಯು ದೇಶದ ಅತ್ಯಂತ ಸ್ವಚ್ಛ ನಗರವೆಂಬ ಇಂದೋರ್ ನ ಖ್ಯಾತಿಗೆ ಹಾನಿಯನ್ನುಂಟು ಮಾಡಿದ್ದು, ತನ್ನ ನಿವಾಸಿಗಳಿಗೆ ಕಲುಷಿತ ನೀರನ್ನು ಪೂರೈಸಿದ್ದಕ್ಕಾಗಿ ಅದನ್ನು ಕುಖ್ಯಾತವಾಗಿಸಿದೆ ಎಂದು ನ್ಯಾಯಾಲಯವು ಕಿಡಿಕಾರಿತ್ತು.
ಜ.15ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿ ಇಡೀ ಪ್ರಕರಣದ ಕುರಿತು ವಿವರಗಳನ್ನು ಸಲ್ಲಿಸುವಂತೆ ಮತ್ತು ಇತರ ಸ್ಥಳಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ರಾಜ್ಯಮಟ್ಟದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುವುದನ್ನು ತಿಳಿಸುವಂತೆ ಇಬ್ಬರು ನ್ಯಾಯಾಧೀಶರ ಪೀಠವು ರಾಜ್ಯದ ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಅವರಿಗೆ ತಾಕೀತು ಮಾಡಿತ್ತು.







